ಬೆಂಗಳೂರು: ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾಋ ಸದ್ಯ ರಾಜಕೀಯ ವಲಯದಲ್ಲಿ ಭಾರೀ ವಿವಾಧ ಹುಟ್ಟು ಹಾಕಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ಹುಟ್ಟು ಹಾಕಿದೆ. ಒಂದೆಡೆ ಸಿಎಂ ಬೊಮ್ಮಾಯಿ ಶಿಕ್ಷಣ ಸಚಿವ
ಈ ಹೇಳಿಕೆ ಬಗ್ಗೆ ಸಮರ್ಥನೆ ಕೊಟ್ಟರೆ, ಅತ್ತ ಕಾಂಗ್ರೆಸ್ ಈ ವಿಚಾರವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಸರ್ಕಾರ ಜವಾಬ್ದಾರಿ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಬೇಕು, ಮನಸ್ಸಿನಲ್ಲಿ ಕೇಸರೀಕರಣ ತುಂಬುವುದು ಸರಿಯಲ್ಲ ಎಂದು ಗುಡುಗಿದೆ.
ಹೌದು ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಳೆದ ಮೂರು ವರ್ಷಗಳಿಂದ ಇದೇ ಕೆಲಸ ಬಿಜೆಪಿ ಮಾಡ್ತಿದೆ. ಸರ್ಕಾರಕ್ಕೆ ನಾಚಿಕೆ ಆಗಬೇಕು. ಕ್ಲಾಸ್ ರೂಂ ಇಲ್ಲ, ಬುಕ್ ಕೊಡ್ತಿಲ್ಲ, ಬಿಸಿ ಊಟ ಇಲ್ಲ, ಟೀಚರ್ಸ್ ಇಲ್ಲ, ಆ ಬಗ್ಗೆ ಗಮನ ಹರಿಸುವ ಬದಲಾಗಿ ಬಣ್ಣ ಬಳಿಯುತ್ತಾರಂತೆ. ಸರ್ಕಾರ ಜವಾಬ್ದಾರಿ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಬೇಕು, ಆದರೆ ಇದಕ್ಕೆ ಬದಲಾಗಿ ಪ್ರತಿ ಹಂತದಲ್ಲಿ ಕೇಸರೀಕರಣ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಗೆ ಕೇಸರಿ ಬಣ್ಣದ ಬಗ್ಗೆ ಭಯ ಇಲ್ಲ, ಗೌರವ ಇದೆ. ಆದರೆ ಮಕ್ಕಳ ಮನಸ್ಸಿನಲ್ಲಿ ಕೇಸರೀಕರಣದ ಹುನ್ನಾರದ ಬಗ್ಗೆ ಮಾತ್ರ ನಮ್ಮ ಆಕ್ಷೇಪ ಎಂದು ಕಿಡಿ ಕಾರಿದ್ದಾರೆ.
ಏನಿದು ವಿವಾದ?
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಕಟ್ಟಿಸಲಾಗುತ್ತಿರುವ ಸುಮಾರು 8 ಸಾವಿರ ಶಾಲಾ ಕೊಠಡಿಗಳಿಗೆ ವಿವೇಕ ಎಂದು ಹೆಸರಿಡುವುದರೊಂದಿಗೆ, ಕೇಸರಿ ಬಣ್ಣ ಹಚ್ಚಲು ಸರ್ಕಾರ ನಿರ್ಧರಿಸಿದೆ. ಈ ವಿಚಾರ ರಾಜಕೀಯ ವಾಕ್ಸಮರಕ್ಕೆ ಹಾದಿ ಮಾಡಿಕೊಟ್ಟಿದೆ. ಇನ್ನು ಭಾನುವಾರಷ್ಟೇ ಗದಗದಲ್ಲಿ ಈ ವಿಚಾರಕ್ಕರೆ ಸಂಬಂಧಿಸಿದಂತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ಕೇಸರಿ ಕೂಡ ಬಣ್ಣವಲ್ಲವೇ? ಆ ಬಣ್ಣ ಚೆನ್ನಾಗಿರುತ್ತದೆ ಎಂದು ಆರ್ಕಿಟೆಕ್ಟ್ ಹೇಳಿದರೆ ಶಾಲೆ ಗೋಡೆಗಳಿಗೆ ಕೇಸರಿ ಬಣ್ಣವನ್ನೇ ಬಳಿಯಲಾಗುತ್ತದೆ. ಬಣ್ಣ, ಕಿಟಕಿ, ಬಾಗಿಲುಗಳ ವಿನ್ಯಾಸದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ’ ಎಂದರು.
ಕೇಸರಿ ಬಣ್ಣ ಭಾರತದ ಧ್ವಜದಲ್ಲಿಯೇ ಇದೆ
ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುತ್ತಿರುವ ಬಗ್ಗೆ ಕಾಂಗ್ರೆಸ್ ವಿರೋಧದ ಬೆನ್ನಲ್ಲೇ ಈ ವಿಚಾರವನ್ನು ಬಲವಾಗಿ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ ಕಾಂಗ್ರೆಸ್‌ಗೆ ಕೇಸರಿ ಬಣ್ಣ ಕಂಡರೆ ಯಾಕೆ ಅಲರ್ಜಿ, ಕೇಸರಿ ಬಣ್ಣ ಭಾರತದ ಧ್ವಜದಲ್ಲಿಯೇ ಇದೆ. ಕೇಸರಿ ಕಂಡರೆ ಏಕೆ ಸಿಟ್ಟು? ಸ್ವಾಮಿ ವಿವೇಕಾನಂದರ ಹೆಸರಿನಲ್ಲಿಯೇ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಅವರೊಬ್ಬ ಸನ್ಯಾಸಿ. ಅವರು ತೊಟ್ಟಿದ್ದು ಕೇಸರಿ ಬಣ್ಣದ ಕಾವಿ. ವಿವೇಕ ಎಂದರೆ ಎಲ್ಲರಿಗೂ ಜ್ಞಾನ, ಅದನ್ನು ಕಲಿಯಲಿ ಎಂದಿದ್ದಾರೆ.
ಅದೇನೇ ಇರಲಿ ಆದರೆ ಚುನಾವಣಾ ಹೊಸ್ತಿಲಲ್ಲಿ ಭುಗಿಲೆದ್ದಿರುವ ಈ ಕೇಸರಿ ವಿಚಾರ ಮತ್ತಷ್ಟು ಕಾವು ಪಡೆದು ಪಕ್ಷಗಳ ಹಾಗೂ ರಾಜಕೀಯ ನಡುವಿನ ವಾಕ್ಸಮರವನ್ನು ತಾರಕಕ್ಕೇರಿಸುವುದರಲ್ಲಿ ಅನುಮಾನವಿಲ್ಲ