ಬೆಂಗಳೂರು: ಮಂಡ್ಯದಲ್ಲಿ ಬಿಜೆಪಿ ಸಂಘಟನೆಗೆ ಯುವ ನಾಯಕತ್ವ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ಬೆನ್ನಲ್ಲೇ ಆ ಯುವ ನಾಯಕ ಯಾರು ಎಂಬ ಪ್ರಶ್ನೆ ಈಗ ಎದ್ದಿದೆ. ಮಂಡ್ಯದಲ್ಲಿ ಬಿಜೆಪಿಗೆ ಶಕ್ತಿ ಇಲ್ಲ. ಕಳೆದ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ JDS ಜಯಭೇರಿ ಭಾರಿಸಿತ್ತು. JDS, ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಮಲ ಅರಳುವುದು ಕಷ್ಟ. ಆದ್ರೆ ಈ ಬಾರಿ ಹೇಗಾದರೂ ಮಾಡಿ ಕಮಲ ಅರಳಿಸಲೇಬೇಕೆಂದು ಬಿಜೆಪಿ ಹೈಕಮಾಂಡ್ ಪಣ ತೊಟ್ಟಿದೆ. ಈ ಕಾರಣಕ್ಕೆ ಯುವ ನಾಯಕನ್ನು ಕರೆ ತರಲು ಬಿಜೆಪಿ ಮುಂದಾಗಿದೆ.
ಯುವ ನಾಯಕ ಮಾತುಗಾರನಾಗಿರಬೇಕು ಮತ್ತು ರಾಜಕೀಯ ಗೊತ್ತಿರಬೇಕು. ಈ ಅರ್ಹತೆ ಇರುವ ವ್ಯಕ್ತಿಯನ್ನು ಹುಡುಕುತ್ತಿರುವ ಬಿಜೆಪಿ ನಾಯಕರ ಕಣ್ಣಿಗೆ ಅಭಿಷೇಕ್ ಅಂಬರೀಶ್ ಕಾಣಿಸಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಸಂಘಟನೆಗೆ ಯುವ ನಾಯಕತ್ವ ಬರುತ್ತದೆ. ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದರು. ಈ ಯುವ ನಾಯಕ ಯಾರು ಎಂದು ಹೇಳಿರಲಿಲ್ಲ. ಈಗ ಬಂದಿರುವ ಮಾಹಿತಿ ಪ್ರಕಾರ ಅಭಿಷೇಕ್ ಅವರನ್ನು ಬಿಜೆಪಿಗೆ ಸೆಳೆಯಲು ಮಾತುಕತೆ ನಡೆಯುತ್ತಿರುವ ವಿಚಾರ ತಿಳಿದು ಬಂದಿದೆ.
ಅಭಿಷೇಕ್‍ಗೂ ಮೊದಲು ಸುಮಲತಾ ಆಪ್ತ ಸಚ್ಚಿದಾನಂದ ಬಿಜೆಪಿ ಸೇರ್ಪಡೆಗೆ ಪ್ಲಾನ್ ಮಾಡಲಾಗಿದೆ. ಸಚ್ಚಿದಾನಂದ ಬಳಿಕ ಸುಮಲತಾ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಸಿಎಂ ಜೊತೆ ಸುಮಲತಾ, ಅಭಿಷೇಕ್ ಮಾತನಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಬಿಜೆಪಿಗೆ ಬರುವ ಬಗ್ಗೆ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಇಲ್ಲಿಯವರೆಗೂ ಎಲ್ಲೂ ಅಧಿಕೃತವಾಗಿ ತಿಳಿಸಿಲ್ಲ. ಸಮಲತಾ ಜನರ ಜೊತೆ ಚರ್ಚೆ ಮಾಡಿ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ.
ಈ ಹಿಂದೆ ಪ್ರತಿಕ್ರಿಯಿಸಿದ್ದ ಬಿಜೆಪಿ ಶಾಸಕ ಯೋಗೇಶ್ವರ್, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷ ಅವರಿಗೆ ಬೆಂಬಲ ನೀಡಿತ್ತು. ಈ ಹಿನ್ನೆಲೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಸುಮಲತಾ ಅವರಿಗೆ ಆಹ್ವಾನ ಮಾಡಿದ್ದೇವೆ. ಮದುವೆ ಸಮಾರಂಭದಲ್ಲಿ ಅವರನ್ನ ಭೇಟಿ ಮಾಡಿದ್ದೆವು, ಸಿಎಂ ಸಹ ಇದ್ದರು. ಅವರು ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಮುಂದೆ ನೋಡೋಣ ಎಂದು ತಿಳಿಸಿದ್ದರು.
ಸುಮಲತಾ ಹೇಳಿದ್ದು ಏನು? ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಗೆ ಮದ್ದೂರಿನಲ್ಲಿ ಏಪ್ರಿಲ್ 28 ರಂದು ಪ್ರತಿಕ್ರಿಯಿಸಿದ್ದ ಅವರು, ಬಿಜೆಪಿ ಮುಖಂಡರನ್ನು ಭೇಟಿಯಾದರೆ ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ ಎಂದು ತಿಳಿಸಿದ್ದರು. ಸಚಿವ ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದಿದ್ದಾರೆ. ನನಗೆ ಈಗ ಸದ್ಯಕ್ಕೆ ಅವಶ್ಯಕತೆ ಇಲ್ಲ. ಈಗ ಚುನಾವಣೆಯೂ ಇಲ್ಲ ಅದರ ಪ್ರಸ್ತಾಪ ಇಲ್ಲ.
ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಜನರು ಏನು ಹೇಳಿದ್ದಾರೋ ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದಿದ್ದರು. ಬೆಂಬಲಿಗರು ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಬೆಂಬಲಿಗರು ಬಿಜೆಪಿ ಸೇರ್ಪಡೆ ಬಗ್ಗೆ ನಾನು ಏನು ಹೇಳುವುದಿಲ್ಲ. ಎಲ್ಲರೂ ಸ್ವತಂತ್ರರು ಯಾವ ಪಕ್ಷಕ್ಕಾದರೂ ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ ಎಂದರು. ಪುತ್ರ ಅಭಿಷೇಕ್ ಚುನಾವಣೆ ಸ್ಪರ್ಧಿಸುತ್ತಾನೋ ಇಲ್ಲವೋ ಎನ್ನುವುದು ಆತನಿಗೆ ಬಿಟ್ಟ ವಿಚಾರ. ಸಿನಿಮಾಗೆ ಬಾ ಎಂದು ನಾವು ಹೇಳಿಲ್ಲ. ರಾಜಕೀಯ ಬಗ್ಗೆನೂ ನಾವು ಹೇಳಲ್ಲ. ಇದು ಆತನ ವೈಯಕ್ತಿಕ ವಿಚಾರ ಎಂದು ಪ್ರತಿಕ್ರಿಯಿಸಿದ್ದರು.