ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿಚಾರದಲ್ಲಿ ಪ್ರಾಥಮಿಕ ಹಂತದ ತನಿಖೆ ಮುಗಿಯುವವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಯಶವಂತಪುರದಲ್ಲಿ ಪಟೇಲ್ ಭೈರಹನುಮಯ್ಯ ಬಹುಮಹಡಿ ವಸತಿ ನಿಲಯಗಳ ಲೋಕಾರ್ಪಣೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಸಚಿವ ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶವಾಗಲಿ, ತೀರ್ಮಾನವಾಗಲಿ ಏನೂ ಇಲ್ಲ.
ಸಂತೋಷ್ ಪಾಟೀಲ್ ಪಾರ್ಥೀವ ಶರೀರ ಪೋಸ್ಟ್ ಮಾರ್ಟಮ್ ಆಗಿದ್ದು, ತನಿಖೆ ಈಗ ಆರಂಭವಾಗಿದೆ. ಪ್ರಾಥಮಿಕ ಹಂತದ ತನಿಖೆ ಮುಗಿದ ನಂತರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ಯಾವುದೇ ಕ್ರಮ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುತ್ತಿಗಾರ ಸಂತೋಷ್ ಪಾಟೀಲ್ ಅವರು ವಾಟ್ಸಾಪ್ ನಲ್ಲಿ ‘ನನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ’ ಎಂದು ಸಂದೇಶ ಕಳುಹಿಸಿ ಉಡುಪಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕರು ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇತ್ತ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ, ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಮದು ತಿಳಿಸಿದ್ದರು. ಅಲ್ಲದೆ ಈಶ್ವರಪ್ಪ ಅವರು ರಾಜೀನಾಮೆ ಕೊಡಬಾರದು. ಯಾಕೆ ರಾಜೀನಾಮೆ ಕೊಡಬೇಕು ಎಂದು ಕೆಲ ಬಿಜೆಪಿ ನಾಯಕರು ಕೂಡ ಈಶ್ವರಪ್ಪ ಪರ ನಿಂತರು.