ಕೂಗು ನಿಮ್ಮದು ಧ್ವನಿ ನಮ್ಮದು

ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ಆರೋಪ ಪ್ರತ್ಯಾರೋಪಗಳ ಚರ್ಚೆ; ಏನಾಗಲಿದೆ ಸಿಎಂ ಯಡಿಯೂರಪ್ಪ ಭವಿಷ್ಯ?

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೀತಿರೋ ನಾಯಕತ್ವ ಬದಲಾವಣೆಯ ಮುಸುಕಿನ ಗುದ್ದಾಟ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ತೊಡೆ ತಟ್ಟಿ ನಿಂತಿರೋ ಎರಡು ಗುಂಪುಗಳು, ಆರೋಪ ಪ್ರತ್ಯಾರೋಪಗಳ ಆಯುಧಗಳನ್ನು ಸಜ್ಜುಗೊಳಿಸಿ ನಿಂತಿವೆ. ಈಗಾಗಲೇ ಹೇಳಿಕೆಗಳ ಮೂಲಕ ಏಟಿಗೆ ಎದಿರೇಟು ಕೊಡ್ತಿರೋ ಸಿಎಂ ಪರ ಹಾಗೂ ವಿರೋಧಿ ಗುಂಪುಗಳು ಉಸ್ತುವಾರಿ ಎದುರು ಬಲಪ್ರದರ್ಶನಕ್ಕೆ ಭಾರಿ ರಣತಂತ್ರ ಹೆಣೆದಿದೆ. ಮುಂದಿನ ಚುನಾವಣೆಗೂ ಮುನ್ನ ಸಿಎಂ ಬದಲಾಗಬೇಕು ಅಂತಾ ವಿರೋಧಿ ಟೀಂ ಒತ್ತಾಯಿಸಿದ್ರೆ, ಭವಿಷ್ಯದಲ್ಲಿ ಯಾವತ್ತೂ ಸಿಎಂ ಬದಲಾವಣೆ ಕೂಗು ಎದ್ದೇಳಲೇಬಾರದು ಅಂತಾ ಸಿಎಂ ಪರ ಗುಂಪು ಪ್ಲ್ಯಾನ್ ಮಾಡಿದೆ.

ಮಧ್ಯಾಹ್ನ 3.30ಕ್ಕೆ ಬೆಂಗಳೂರಿಗೆ ಅರುಣ್ ಸಿಂಗ್ ಆಗಮನ
ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಏರ್ಪೋರ್ಟ್ನಿಂದ ಕುಮಾರಕೃಪಾ ಗೆಸ್ಟ್ಹೌಸ್ಗೆ ಬಂದಿಳಿಯಲಿದ್ದಾರೆ. ಬಳಿಕ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಸಭೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗಿಯಾಗೋ ಸಾಧ್ಯತೆ ಇದೆ. ಇನ್ನು ವಿಶೇಷ ಅಂದ್ರೆ ಇಂದಿನ ಸಭೆಗೆ ಶಾಸಕರಿಗೆ, ಸಂಸದರಿಗೆ ನೋ ಎಂಟ್ರಿ ಅಂತಾ ಹೇಳಲಾಗಿದ್ದು, ಸಚಿವರೊಂದಿಗೆ ಮಾತ್ರ ಸಭೆ ನಡೆಯಲಿದೆ. ಹೀಗಾಗಿ ನಾಳೆಯಿಂದ ಪರ-ವಿರೋಧ ಗುಂಪಿನ ಅಸಲಿ ಆಟ ಶುರುವಾಗಲಿದೆ. ನಾಳೆ ಶಾಸಕರ ಭೇಟಿಗೆ ಅರುಣ್ ಸಿಂಗ್ ಸಮಯ ಮೀಸಲಿಟ್ಟಿದ್ದು, ನಾಳೆ ಬೆಳಗ್ಗೆ 7ರಿಂದ ರಾತ್ರಿ 11 ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ವೇಳೆ ಶಾಸಕರು ಹಾಗೂ ಸಂಸದರ ತಮಗಿರೋ ನೋವು, ಅಸಮಾಧಾನ ತೋಡಿಕೊಳ್ಳಲು ಅವಕಾಶ ಕೊಡಲಾಗಿದೆ. ಕೆ.ಕೆ. ಗೆಸ್ಟ್ಹೌಸ್ನಲ್ಲಿ ಶಾಸಕರೊಂದಿಗೆ ಅರುಣ್ ಸಿಂಗ್ ಸಭೆ ನಡೆಸಲಿದ್ದಾರೆ. ಇನ್ನು ನಾಡಿದ್ದು ಶುಕ್ರವಾರ ಕೋರ್ ಕಮಿಟಿ ಸದಸ್ಯರೊಂದಿಗೆ ಸಭೆ ನಡೆಸೋ ಅರುಣ್ ಸಿಂಗ್ ಅವತ್ತೇ ಸಂಜೆ ದೆಹಲಿಗೆ ತೆರಳಲಿದ್ದಾರೆ.

error: Content is protected !!