ಹುಬ್ಬಳ್ಳಿ: ಬಸನಗೌಡ ಪಾಟೀಲ ಯತ್ನಾಳ ಪಕ್ಷದ ನಾಯಕಲ್ಲ. ಅವರೇನೋ ರಾಜ್ಯ, ರಾಷ್ಟ್ರ ನಾಯಕರಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿ ಇಲ್ಲ. ಹೀಗಾಗಿ ಅವರ ಮಾತಿಗೆ ಮನ್ನಣೆ ಕೊಡಬೇಕಾಗಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ಬಗ್ಗೆ ಮಾತನಾಡಿದ್ದರ ಬಗ್ಗೆ ಹಿಂದೆಯೇ ನೋಟೀಸ್ ನೀಡಲಾಗಿದೆ. ಅದಕ್ಕೆ ಉತ್ತರ ನೀಡಿದ್ದಾರೆ. ಹಲವು ಬಾರಿ ಹೇಳಿದರೂ ಅದು ಪುನರಾವರ್ತನೆಯಾಗಿದೆ. ಅವರ ಸ್ವಭಾವ ಇರುವುದೇ ಹಾಗೆ. ತಮ್ಮ ಮಾತುಗಳಿಂದ ಪಕ್ಷದ ಮೇಲೆ ಸ್ವಲ್ಪ ಪರಿಣಾಮ ಬೀರಲಿದೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಹಾಗೂ ಬಸವನಗೌಡ ಯತ್ನಾಳ ಅವರು ಅಲ್ಪಸಂಖ್ಯಾತರಿಗೆ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಹೆಚ್ಚಿಗೆ ಮಹತ್ವ ಕೊಡಬೇಕಾಗಿಲ್ಲ. ಅವರಿಬ್ಬರು ಪಕ್ಷದ ನಾಯಕರಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡುವುದು ಧರ್ಮ. ಆ ಕೆಲಸವನ್ನು ಪಕ್ಷ ಮಾಡಿದೆ. ಎಲ್ಲಾ ವರ್ಗ, ಸಮಾಜಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ ಬಿಜೆಪಿ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಕೋರ್ ಕಮಿಟಿಯಲ್ಲಿದ್ದಾರೆ. ಅವರೇ ಟಿಕೆಟ್ ಅಂತಿಮಗೊಳಿಸುವವರು. ಹೀಗಿರುವಾಗ ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುತ್ತಾ ಎನ್ನುವ ಪ್ರಶ್ನೆ ಸರಿಯಲ್ಲ. ಜಿಲ್ಲೆಯಲ್ಲಿ ಯಾವ ನಾಯರ ನಡುವೆ ಶೀತಲ ಸಮರವಿಲ್ಲ. 40% ಸರಕಾರ ಎನ್ನುವುದರಲ್ಲಿ ಯಾವುದೇ ಸಾಕ್ಷಾಧಾರಗಳಿಲ್ಲ. ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಪ್ರಾಮಾಣಿಕ ಹಾಗೂ ಕಾಮನ್ ಮ್ಯಾನ್ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ರಾಜ್ಯ, ರಾಜ್ಯದ ಜನರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದರು.
ರಾಹುಲ್ ಗಾಂಧಿ ಮಾರ್ನಿಂಗ್ ಹಾಗೂ ಯುವನಿಂಗ್ ವಾಕ್ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರನ್ನು ಜೋಡಿಸಲು ಈ ಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು