ಬೆಳಗಾವಿ: ರಾಜ್ಯದಲ್ಲಿ ಪೊಲೀಸರಿಗೆ ಎನ್.ಡಿ.ಎ ಮಾದರಿಯಲ್ಲಿ ತರಬೇತಿ ನೀಡಲಾಗುವುದು. ಭಾರತೀಯ ಸೈನ್ಯದ ಉನ್ನತ ಮಟ್ಟದ ತರಬೇತಿ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ತರಬೇತಿ ಶಾಲೆ ಮಾಡಲು ಯೋಗ್ಯ ಸ್ಥಳ ಬೆಳಗಾವಿ. ಹೀಗಾಗಿ ಬೆಳಗಾವಿಯಲ್ಲಿ ಇರೋ ಸಂಪನ್ಮೂಲವನ್ನು ಉಪಯೋಗ ಮಾಡಿಕೊಂಡು ತರಬೇತಿ ಶಾಲೆ ಆರಂಭ ಮಾಡಲಾಗುವುದು. ಇಂದು ಒಂದು ಸಭೆಯನ್ನು ಸ್ಥಳೀಯ ಮಟ್ಟದ ಅಧಿಕಾರಿಗಳ ಜೊತೆಗೆ ಮಾಡುತ್ತೇನೆ. ತರಬೇತಿ ಶಾಲೆ ವಿಚಾರವಾಗಿ ಸಭೆಯಲ್ಲಿ ಚರ್ಚಿಸಿ, ನಂತರ ಕೇಂದ್ರ ರಕ್ಷಣಾ ಸಚಿವರ ಸಹಾಯ ಪಡೆದು ತರಬೇತಿ ಶಾಲೆ ಆರಂಭಿಸಲಾಗುವುದು. ಮುಖ್ಯ ಮಂತ್ರಿಗಳ ಮೂಲಕ ರಕ್ಷಣಾ ಸಚಿವರ ಜೊತೆಗೆ ಚರ್ಚೆ ನಡೆಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ಬೆಳಗಾವಿಯಲ್ಲಿ ಈ ತರಬೇತಿ ಶಾಲೆ ಆರಂಭ ಮಾಡುವ ಉದ್ದೇಶ ಇದೆ. ಇನ್ನು ರಾಜ್ಯದಲ್ಲಿ ಒಂದೇ ತರಬೇತಿ ಶಾಲೆ ಇರಲಿದೆ.
ಇನ್ನು ರಾಜ್ಯದಲ್ಲಿ ಕಾಲಕಾಲಕ್ಕೆ ಶಸ್ತ್ರಾಸ್ತ್ರ ಬದಲಾವಣೆ ಆಗುತ್ತಿದೆ. ರಾಜ್ಯದಲ್ಲಿನ ಅಪರಾಧ ಪ್ರಕರಣಗಳ ಶೀಘ್ರವಾಗಿ ಮುಗಿಸೋಕೆ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಇಲಾಖೆಯಲ್ಲಿ ಎಲ್ಲಾ ರೀತಿಯಲ್ಲಿ ಯತ್ನ ನಡೆಯುತ್ತಿದೆ. ಉಳಿದಂತೆ ಬೆಳಗಾವಿಯಲ್ಲಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ನಗರ ಪೊಲೀಸರ ಆಯುಕ್ತರ ಕಚೇರಿ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ ಎಂದರು. ಇದೇ ವೇಳೆ ರಾಜ್ಯದಲ್ಲಿ ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ ಪ್ರಯತ್ನ ಆರಂಭವಾಗಿದೆ. ಮುಖ್ಯಮಂತ್ರುಗಳ ಅನುಮತಿ ಪಡೆದು ರಾಜ್ಯಪಾಲರ ಅನುಮತಿಗೆ ಕಳುಹಿಸುತ್ತೇನೆ. ಇನ್ನು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಇಲ್ಲ. ಯಡಿಯೂರಪ್ಪ ಅವರು ಉಳಿದ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಸದೃಢ, ಸಮರ್ಥ ಆಡಳಿತವನ್ನು ಬಿ.ಎಸ್.ವೈ ನೀಡಲಿದ್ದಾರೆ ಎಂದು ಗೃಹ ಸಚಿವ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಹೇಳಿದರು.