ಬೆಂಗಳೂರು: ಅಗ್ನಿಪಥ್ ಯೋಜನೆ ವಿರೋಧಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರ ಹಾಕಿದ್ದಾರೆ. ಅಗ್ನಿಪಥ್ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಭವಿಷ್ಯದಲ್ಲಿ ಏನೋ ಆಗುತ್ತದೆ ಅಂತ ಕೆಲವರು ಹೀಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಇದೊಂದು ಹೊಸ ಯೋಜನೆ. ಈ ದೇಶದಲ್ಲಿ ಏನು ಆಗಲು ಬಿಡಬಾರದು ಎನ್ನುವ ಒಂದು ವರ್ಗ ಇದೆ. ಆ ವರ್ಗ ವಿರೋಧ ಮಾಡುತ್ತಿದೆ ಎಂದು ಕಿಡಿಕಾರಿದರು.
ಯೋಜನೆ ಇನ್ನೂ ಜಾರಿಯಾಗಿಲ್ಲ. ಆಗಲೇ ವಿರೋಧ ಮಾಡಿದರೆ ಹೇಗೆ. ಇದೊಂದು ಉತ್ತಮ ಯೋಜನೆ. ಇಸ್ರೇಲ್ ದೇಶದಲ್ಲಿ ಕಡ್ಡಾಯವಾಗಿ ಸೇನೆ ತರಬೇತಿ ಇರಬೇಕು ಅಂತ ಇದೆ. ಈ ಯೋಜನೆಯಲ್ಲಿ 4 ವರ್ಷ ಟ್ರೈನಿಂಗ್ ಕೊಡುವುದಕ್ಕೆ ಸರ್ಕಾರ ಚಿಂತನೆ ಮಾಡಿದೆ. ಆದಾದ ಬಳಿಕ ಅನೇಕ ಉದ್ಯೋಗಕ್ಕೆ ಯೋಜನೆ ಅನುಕೂಲ ಆಗಲಿದೆ ಎಂದರು.
ಇಂತಹ ಒಳ್ಳೆ ಯೋಜನೆ ವಿರುದ್ಧ ಬೆಂಕಿ ಹಚ್ಚಿದರೆ ಹೇಗೆ? 4 ವರ್ಷಗಳವರೆಗೂ ಸಂಬಳ ಸಿಗಲಿದೆ.
ಬಳಿಕ ವಿಶೇಷ ಭತ್ಯೆಯೂ ಸಿಗಲಿದೆ. ಮುಂದೆ ಹಲವು ಉದ್ಯೋಗಕ್ಕೂ ಈ ಟ್ರೈನಿಂಗ್ ಅನುಕೂಲ ಆಗಲಿದೆ. ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ. ಈ ಟ್ರೈನಿಂಗ್ ಪಡೆದ ಮೇಲೆ ಶೇ. 25 ಮಿಲಿಟರಿಗೆ ನೇಮಕ ಆಗುತ್ತೆ. ಪೊಲೀಸ್ ಹುದ್ದೆ ಸೇರಿದಂತೆ ಹಲವು ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು