ಬೆಂಗಳೂರು: ಕರ್ನಾಟಕಕ್ಕೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಂಜೂರಾಗಿದ್ದು, ಶಿವಮೊಗ್ಗದಲ್ಲಿ ರಕ್ಷಾ ವಿಶ್ವವಿದ್ಯಾಲಯ ಆರಂಭವಾಗಲಿದೆ. ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಈ ಶೈಕ್ಷಣಿಕ ವರ್ಷದದಿಂದಲೇ ತರಗತಿ ಆರಂಭಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ ಈ ಬಗ್ಗೆ ಇಂದು ಮಾಹಿತಿ ನೀಡಿರುವ ಆರಗ ಜ್ಞಾನೇಂದ್ರ, ಕರ್ನಾಟಕಕ್ಕೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಂಜೂರಾಗಿದೆ. 2 ತಿಂಗಳ ಹಿಂದೆ ಎಸಿಎಸ್ ಅಹಮದಾಬಾದ್ ವಿವಿಗೆ ತೆರಳಿದ್ದೆವು. ನೀವು ಅಪೇಕ್ಷೆಪಟ್ಟರೆ ವಿವಿ ಆರಂಭಿಸುವುದಾಗಿ ಅವರು ಹೇಳಿದ್ದರು. ಅದರಂತೆ ಶಿವಮೊಗ್ಗದಲ್ಲಿ ವಿಶ್ವವಿದ್ಯಾಲಯ ಆರಂಭವಾಗಲಿದೆ ಎಂದರು.
ಈ ಶೈಕ್ಷಣಿಕ ವರ್ಷದಲ್ಲೇ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ತರಗತಿ ಆರಂಭಿಸಲಾಗುವುದು. ಕ್ಯಾಂಪಸ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ನವಿಲೆ ಬಳಿ 8 ಎಕರೆ ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ. ಡಿಪ್ಲೊಮಾ, ಡಿಗ್ರಿಗೆ ಪಿಯುಸಿ ಅರ್ಹತೆ ಹೊಂದಿರಬೇಕು. ಇನ್ನು ಪಿಜಿಗೆ ಡಿಗ್ರಿ ಪಡೆದಿರಬೇಕು. ಮಿಲಿಟರಿ, ಆಂತರಿಕ ಭದ್ರತಾ ವಿಭಾಗದ ಕೆಲಸದ ಬಗ್ಗೆ ಬೋಧನೆ ಮಾಡಲಾಗುತ್ತದೆ. ಮೆರಿಟ್ ಆಧಾರದ ಮೇಲೆ ಇಲ್ಲಿ ಪ್ರವೇಶಾತಿ ನಡೆಯಲಿದೆ ಎಂದು ವಿವರಿಸಿದರು.
ಯಾವೆಲ್ಲಾ ಕೋರ್ಸ್ಗಳು ಲಭ್ಯ?
1) ಡಿಪ್ಲೋಮಾ ಇನ್ ಸೈನ್ಸ್
2) ಕಾರ್ಪೊರೇಟ್ ಸೆಕ್ಯೂರಿಟಿ ಮ್ಯಾನೇಜ್ಮೆಂಟ್
3) ಡಿಪ್ಲೋಮಾ ಇನ್ ಕ್ರಿಮಿನಲ್ ಇನ್ವೆಸ್ಟಿಗೇಶನ್
4) ಪಿಜಿ ಡಿಪ್ಲೋಮಾ ಸೈಬರ್ ಸೆಕ್ಯೂರಿಟಿ, ಸೈಬರ್ ಲಾ
5) ರೋಡ್ ಟ್ರಾಫಿಕ್ ಸೇಫ್ಟಿ ಮ್ಯಾನೇಜ್ಮೆಂಟ್
6) ಫಿಜಿಕಲ್ ಫಿಟ್ನೆಸ್ ಮ್ಯಾನೇಜ್ಮೆಂಟ್
ಪೊಲೀಸ್ ಇಲಾಖೆ ಹಾಗೂ ಸಶಸ್ತ್ರ ಪಡೆಗಳ ತರಬೇತಿ ಮತ್ತು ಕರ್ನಾಟಕ ಪೊಲೀಸ್ , ಸರ್ಕಾರಿ ಸಂಶೋಧನೆ ವಿಭಾಗಕ್ಕೆ ಸೇರಲು ಬೇಕಾದ ತರಬೇತಿಯನ್ನು ಯುವಕರಿಗೆ ನೀಡಲಾಗುತ್ತದೆ.