ಕೋಲಾರ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೋಲಾರದಲ್ಲಿ ಭಾನುವಾರ ರೌಂಡ್ಸ್ ಹಾಕಿದ್ದಾರೆ. ಜನರ ಮತ ಸೆಳೆಯುವ ಹಿನ್ನೆಲೆಯಲ್ಲಿ ಅಣ್ಣಾಮಲೈ ಜೊತೆಗೆ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಜೊತೆಯಾಗಿ ಕೋಲಾರ, ಮುಳಬಾಗಿಲು ಹಾಗೂ ಬಂಗಾರಪೇಟೆಯಲ್ಲಿ ಬೈಕ್ ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ.
ಕೋಲಾರ ನಗರದ ಬಂಗಾರಪೇಟೆ ವೃತ್ತಕ್ಕೆ ಭೇಟಿ ನೀಡಿದ ಅಣ್ಣಾಮಲೈ, ಅಲ್ಲಿನ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಬೈಕ್ ರ‍್ಯಾಲಿ ಮೂಲಕ ಕೆಜಿಎಫ್‌ಗೆ ತೆರಳಿದ್ದಾರೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ಬೆನ್ನಲ್ಲೇ ಬಿಜೆಪಿ ಪ್ರಚಾರ ಕಾರ್ಯಕ್ರಮ ಪ್ರಾರಂಭಿಸಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಪೂರ್ವ ತಯಾರಿ ನಡೆಸುತ್ತಿರುವ ಬಿಜೆಪಿ ಕೋಲಾರ ಜಿಲ್ಲೆಯಲ್ಲಿ ಕೇಸರಿ ಅರಳಿಸಲು ತಯಾರಿ ನಡೆಸುತ್ತಿದೆ. ಅಣ್ಣಾಮಲೈ ಮುಖಾಂತರ ತಮಿಳು ಪ್ರಭಾವ ಇರುವ ಕೆಜಿಎಫ್‌ನಲ್ಲಿ ಜನರ ಮತ ಸೆಳೆಯಲು ಬಿಜೆಪಿ ಯೋಜನೆ ನಡೆಸಿದೆ.