ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ತಮ್ಮ ಬೆಂಬಲಿತ 28 ಮತದಾರರನ್ನು ರೆಸಾರ್ಟ್ ನಲ್ಲಿ ಇರಿಸಿ, ಇಂದು ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ ಮೇಲೆಯೂ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಲಕ್ ಕೈ ಕೊಟ್ಟಿದೆ. ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಸೋಲು ಅನುಭವಿಸಿದ್ದಾರೆ.
ಎರಡು ಮತಗಳ ಅಂತರದಿಂದ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ ಗೆಲುವಿನ ಕದ ತಟ್ಟಿದ್ದಾರೆ. ಅಂಜಲಿ ನಿಂಬಾಳ್ಕರ್ ಗೆ 25 ಮತ ಚಲಾವಣೆ ಆಗಿದ್ರೆ, ಅತ್ತ ಅರವಿಂದ ಪಾಟೀಲಗೆ 27 ಮತಗಳು ಚಲಾವಣೆಯಾಗಿದೆ. ಈ ಫಲಿತಾಂಶ ಎಲ್ಲರನ್ನೂ ಅಚ್ಚರಿಗೊಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಯವರ ಪ್ಲ್ಯಾನ್ ಸಕ್ಸಸ್ ಆಗಿದ್ದು, ಗೋಕಾಕ್ ಸಾಹುಕಾರ ಅರವಿಂದ ಪಾಟೀಲ್ ಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಮತದಾನ ಆರಂಭವಾಗುತ್ತಿದ್ದಂತೆ ಸ್ಥಳದಲ್ಲೇ ಠಿಕಾಣಿ ಹೂಡಿದ್ದ ಬಿಜೆಪಿ ನಾಯಕರು ಸಾಕಷ್ಟು ತಂತ್ರಗಳನ್ನು ಹೆಣೆದಿದ್ದು, ಅಂಜಲಿ ನಿಂಬಾಳ್ಕರ್ ಪರವಾಗಿ ರೆಸಾರ್ಟ್ ಸೇರಿದವರಿಂದಲೇ ಅಡ್ಡ ಮತದಾನ ನಡೆದಿದೆ.
ಹೀಗಾಗಿ ಅರವಿಂದ್ ಪಾಟೀಲ್ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಫಲಿತಾಂಶ ಹೊರಬಿಳುತ್ತಿಂದಂತೆ ಅರವಿಂದ ಪಾಟೀಲ್ ಬೆಂಬಲಿಗರು ಗುಲಾಲ್ ಹಚ್ಚಿ ಸಂಭ್ರಮಾಚರಣೆ ಮಾಡಿದರು. ಅಂಜಲಿ ನಿಂಬಾಳ್ಕರ್ ಕಾರಿಗೆ ದಾರಿ ಸಿಗದಿದ್ದಾಗ ಖುದ್ದು ಅಂಜಲಿ ನಿಂಬಾಳ್ಕರ್ ಕಾರಿನಿಂದ ಕೆಳಗಿಳಿದು, ಅರವಿಂದ್ ಪಾಟೀಲ್ ಬೆಂಬಲಿಗರ ಬಳಿ ತೆರಳಿ ಅಭಿನಂದನೆ ತಿಳಿಸಿದ್ದು, ವಿಶೇಷವಾಗಿತ್ತು.