ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್ ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಮಧ್ಯೆ ನಟ ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಇತ್ತೀಚೆಗೆ ಅವರು ಪಕ್ಷ ಸೇರೋಕೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು ಎನ್ನಲಾಗಿತ್ತು. ಆದರೆ, ಈ ಸುದ್ದಿಗೆ ಬ್ರೇಕ್ ಬಿದ್ದಿದೆ. ಅನಂತ್ ನಾಗ್ ಅವರು ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆ ಆಗುತ್ತಿಲ್ಲ. ಈ ಬಗ್ಗೆ ಅವರ ಆಪ್ತ ಮೂಲಗಳಿಂದಲೇ ಸ್ಪಷ್ಟನೆ ಸಿಕ್ಕಿದೆ. ಈ ವಿಚಾರದಲ್ಲಿ ಅವರು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಅನೇಕ ಸಿನಿಮಾ ಸೆಲೆಬ್ರಿಟಿಗಳು ರಾಜಕೀಯ ಸೇರಿ ತಮ್ಮ ಅದೃಷ್ಟಪರೀಕ್ಷೆ ಮಾಡಿಕೊಳ್ಳಲು ರೆಡಿ ಆಗಿದ್ದಾರೆ. ಫೆ.22ರಂದು ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎನ್ನಲಾಗಿತ್ತು. ಆದರೆ, ಅವರು ಅಂದು ಕಾರ್ಯಕ್ರಮಕ್ಕೆ ಹಾಜರಿ ಹಾಕಿಲ್ಲ. ಇದು ತೀವ್ರ ಕುತೂಹಲ ಮೂಡಿಸಿತ್ತು. ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದು ನಿಜ, ಆದರೆ, ಆಗ ಅವರಿಗೆ ರಾಜಕೀಯ ಸೇರುವ ಆಲೋಚನೆ ಇರಲಿಲ್ಲ.
ಇಂದು (ಏಪ್ರಿಲ್ 1) ದೆಹಲಿಯಲ್ಲಿ ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆಯಾಗ್ತಾರೆ ಅನ್ನೋ ವದಂತಿ ಹಬ್ಬಿತ್ತು. ಅನಂತ್ ನಾಗ್ ಅವರು ಬೆಂಗಳೂರಿನಲ್ಲೇ ಇದ್ದಾರೆ. ‘ಆ ರೀತಿಯ ಯಾವ ಆಲೋಚನೆ ಇಲ್ಲ. ಯಾವ ಪಕ್ಷಕ್ಕೂ ಸೇರಲ್ಲ. ಇದನ್ನು ಯಾರು ಹಬ್ಬಿಸ್ತಿದ್ದಾರೋ ನಂಗೆ ಗೊತ್ತಿಲ್ಲ’ ಎಂದು ಅನಂತ್ ನಾಗ್ ಬೇಸರ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.
ಅನಂತ್ ನಾಗ್ ಅವರು ಈ ಮೊದಲು ರಾಜಕೀಯ ಸೇರಿದ್ದರು. ಎಂಎಲ್ಸಿ, ಎಂಎಲ್ಎ ಆಗಿದ್ದರು. ಅವರು ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿದ್ದರು. 2004ರಲ್ಲಿ ಜೆಡಿಎಸ್ನಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಬಳಿಕ ಅನಂತ್ ನಾಗ್ ರಾಜಕೀಯದಿಂದ ದೂರ ಉಳಿದರು.