ಕೂಗು ನಿಮ್ಮದು ಧ್ವನಿ ನಮ್ಮದು

ಮದ್ಯಪ್ರಿಯರಿಗೆ ಶಾಕ್‌, ಇಂದಿನಿಂದ ಮದ್ಯ ಕೊರತೆ ಸಾಧ್ಯತೆ

ನವದೆಹಲಿ: ದೆಹಲಿಯ ಬಹುತೇಕ ಖಾಸಗಿ ಮದ್ಯದಂಗಡಿಗಳ ಪರವಾನಗಿ ಅವಧಿಯು ಮುಕ್ತಾಯಗೊಳ್ಳಲಿದ್ದು, ಅವುಗಳನ್ನು ಬಂದ್‌ ಮಾಡಲು ನಿರ್ಧರಿಸಿರುವುದರಿಂದ ರಾಷ್ಟ್ರರಾಜಧಾನಿಯಲ್ಲಿ ಮದ್ಯದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೆಹಲಿ ಸರ್ಕಾರದ ಮೂಲಗಳು ತಿಳಿಸಿರುವ ಪ್ರಕಾರ, ಮದ್ಯದ ಅಂಗಡಿಗಳು ಆಗಸ್ಟ್‌ ಅಂತ್ಯದ ವರೆಗೆ ತೆರೆದಿರಲು ಅವಕಾಶ ನೀಡುತ್ತವೆ ಎಂದು ಹೇಳಲಾಗಿದೆ.

ಹಳೆಯ ಅಬಕಾರಿ ನೀತಿಯ ಆಡಳಿತಕ್ಕೆ ಮರಳಲು ನಿರ್ಧರಿಸಿರುವ ಸರ್ಕಾರ ತನ್ನದೇ ಏಜೆನ್ಸಿಗಳ ಮೂಲಕ ಮಳಿಗೆಗಳನ್ನು ನಡೆಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯಿಂದಾಗಿ ಹೊಸ ಅಂಗಡಿಗಳನ್ನು ತೆರೆಯಲು ಸ್ವಲ್ಪ ಕಾಲ ತೆಗೆದುಕೊಳ್ಳುತ್ತದೆ. ಹಾಗಾಗಿ ಮದ್ಯದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದೆಹಲಿ ಸರ್ಕಾರ ಹಳೆಯ ಅಬಕಾರಿ ನೀತಿಗೆ ಮರಳುವ ಮೂಲಕ ಆರು ತಿಂಗಳ ಕಾಲ ಸ್ವತಃ ಮಳಿಗೆಗಳನ್ನು ನಡೆಸುವುದಾಗಿ ಶನಿವಾರ ಹೇಳಿತ್ತು.

2021-22ರ ಅಬಕಾರಿ ನೀತಿ ಅಡಿಯಲ್ಲಿ ದೆಹಲಿಯಲ್ಲಿ ೪೬೮ ಚಿಲ್ಲರೆ ಮದ್ಯದಂಗಡಿಗಳು ನಡೆಯುತ್ತಿದ್ದು, ಜುಲೈ ೩೧ರ ನಂತರ ಪರವಾನಗಿ ಅವಧಿ ಮುಕ್ತಾಯವಾಗಲಿದೆ. ಇನ್ನೂ ಕೆಲ ಅಂಗಡಿಗಳಲ್ಲಿ ಬಿಯರ್‌ಗಳು ಮಾತ್ರವೇ ಲಭ್ಯವಾಗುತ್ತಿದ್ದು, ಜನರು ಅಗತ್ಯವಿದ್ದಷ್ಟು ಪಡೆದುಕೊಳ್ಳುತ್ತಿದ್ದಾರೆ. ಆದರೆ ತಮ್ಮ ನೆಚ್ಚಿನ ಬ್ರ್ಯಾಂಡ್‌ ಕೇಳಿಕೊಂಡು ಬರುವವರು ಮಾತ್ರ ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ ಎಂದು ಮದ್ಯದಂಗಡಿ ಮಾಲೀಕರು ಹೇಳುತ್ತಿದ್ದಾರೆ.

ದೆಹಲಿಯ ಹಳೆಯ ಮದ್ಯ ನೀತಿ ಏನು?
ದೆಹಲಿಯ ಮೂಲ ಮದ್ಯ ನೀತಿ ಪ್ರಕಾರ, ಮದ್ಯ ಮಾರಾಟದಲ್ಲಿ ಯಾರೂ ಕೂಡ ರಿಯಾಯಿತಿ ಕೊಡುವಂತಿಲ್ಲ ಎಂದಿತ್ತು. ಮದ್ಯ ಮಾರಾಟದಲ್ಲಿ ಖಾಸಗಿಗಿಂತ ಸರ್ಕಾರಿ ಮಳಿಗೆಗಳೇ ಹೆಚ್ಚಿದ್ದವು. ಕರ್ನಾಟಕದಲ್ಲಿ ಎಂಎಸ್‌ಐಎಲ್ ಇದ್ದಂತೆ ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರಿ ಸ್ವಾಮ್ಯದ ನಾಲ್ಕು ನಿಗಮಗಳಿವೆ.

2021ಕ್ಕೆ ಮುನ್ನ ದೆಹಲಿಯಲ್ಲಿ ೮೬೪ ಮದ್ಯದಂಗಡಿಗಳಿದ್ದವು. ಅದರಲ್ಲಿ ಸರ್ಕಾರಿ ಸಂಸ್ಥೆಗಳ ಮಳಿಗೆಗಳೇ ೪೭೫ ಇದ್ದವು. ದೆಹಲಿಯಲ್ಲಿ ಸಮರ್ಪಕವಾದ ಮದ್ಯ ನೀತಿ ಇರಲಿಲ್ಲ. ಆದ ಕಾರಣ ಸರ್ಕಾರಿ ಸ್ವಾಮ್ಯದ ಲಿಕ್ಕರ್ ಶಾಪ್‌ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ

error: Content is protected !!