ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಕ್ರೈಂ ಲೋಕಕ್ಕೆ ಎಚ್ಚರಿಕೆಯ ಗಂಟೆ, ಹಂತಕರಿಗೆ ಸಿಂಹ ಸ್ವಪ್ನವಾದ ಎಸಿಪಿ ಬರಮನಿ: ಆರೋಪಿ ಮೇಲೆ ಫೈರಿಂಗ್

ಬೆಳಗಾವಿ: ಬೆಳಗಾವಿಯಲ್ಲಿ ಬಹುವರ್ಷಗಳ ನಂತರ ಪೊಲೀಸರ ರಿವಾಲ್ವಾರ್ ಸದ್ದು ಮಾಡಿದೆ. ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಕೊಲೆ, ಕೊಲೆಯತ್ನ, ಸುಲಿಗೆ ಸೇರಿದಂತೆ 9ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೆಳಗಾವಿ ಹಾಗೂ ಮಹಾರಾಷ್ಟ್ರದ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ.

ಉದ್ಯಮಿ ಕೊಲೆ ಆದಾಗಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿ ವಿಶಾಲಸಿಂಗ್ ಚೌಹಾಣ್ ನಿನ್ನೆ ರಾತ್ರಿ ಬೆಳಗಾವಿಗೆ ಬಂದಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಹೈ ಅಲರ್ಟ್ ಆಗಿದ್ದರು. ಆರೋಪಿ ಇಂದು ನಸುಕಿನ ಜಾವ 3 ಗಂಟೆಯ ಸುಮಾರಿಗೆ ಬೆಳಗಾವಿಯ ವೀರಭದ್ರೇಶ್ವರ ನಗರದ ಕೊಯ್ಲಾ ಹೊಟೇಲ್ ಬಳಿ ಬೈಕ್ ಮೇಲೆ ಬರುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ವಿಶಾಲಸಿಂಗ್, ತನ್ನ ಬಳಿಯಿದ್ದ ಚಾಕುವಿನಿಂದ ಪೊಲೀಸ್ ಪೇದೆ ಮೇಲೆ ಅಟ್ಯಾಕ್ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಯಾವಾಗ ತನ್ನ ಸಿಬ್ಬಂದಿ ಮೇಲೆ ಅಟ್ಯಾಕ್ ಆಯ್ತೋ ಆಗ, ತಡಮಾಡದ ಕೆಚ್ಚೆದೆಯ ಅಧಿಕಾರಿ ಎಸಿಪಿ ನಾರಾಯಣ ಬರಮನಿ ತಮ್ಮ ಸರ್ವಿಸ್ ರಿವಾಲ್ವಾರ್ ನಿಂದ ಎರಡು ಸುತ್ತು ಗುಂಡು ಹಾರಿಸಿ ಹಂತಕನನ್ನು ವಶಕ್ಕೆ ಪಡೆದಿದ್ದಾರೆ.

ಗುಂಡೆಟು ತಿಂದು ಚಿಕಿತ್ಸೆ ಪಡೆಯುತ್ತಿರುವ ಆರೋಪಿ

ಇನ್ನು ಮೂಲತಃ ಕಿತ್ತೂರು ತಾಲೂಕಿನ ಚಿಕ್ಕನಂದಿ ಗ್ರಾಮದ ಆರೋಪಿ ವಿಶಾಲಸಿಂಗ್ ಚವ್ಹಾಣ, ಸಧ್ಯ ಬೆಳಗಾವಿಯ ಶಾಸ್ತ್ರಿ ನಗರದಲ್ಲಿ ವಾಸವಿದ್ದ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮಾರ್ಚ್ ನಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ನಂತರ ತಲೆ ಮರೆಸಿಕೊಂಡಿದ್ದ ಆರೋಪಿ, ಇದೀಗ ಮೊಣಕಾಲಿಗೆ ಗುಂಡು ತಗುಲಿ ಗಂಭೀರ ಗಾಯಗೊಂಡು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೆಳಗಾವಿ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯ, ಕಾ&ಸು ಡಿಸಿಪಿ ರವೀಂದ್ರ ಗಡಾದಿ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಸೂಪರ್ ಕಾಪ್ ಎಸಿಪಿ ನಾರಾಯಣ ಬರಮನಿ, ಇನ್ಸ್ ಪೆಕ್ಟರ್ ಗಳಾದ  ನಿಂಗನಗೌಡ ಪಾಟೀಲ್, ಧೀರಜ್ ಶಿಂದೆ ಮತ್ತು ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಹಂತಕ ಅಂದರ್ ಆಗಿದ್ದಾನೆ. ಘಟನೆಯಲ್ಲಿ ಓರ್ವ ಪೊಲೀಸ್ ಪೇದೆಗೂ ತೀವ್ರ ಗಾಯಗಳಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ರಿಮಿನಲ್ ಗಳಿಗೆ ಮತ್ತೊಮ್ಮೆ ಸಿಂಹ ಸ್ವಪ್ನವಾದ ಎಸಿಪಿ ನಾರಾಯಣ ಬರಮನಿ

ಕೊಲೆ, ಕೊಲೆಯತ್ನ, ಸುಲಿಗೆ, ದೊಂಬಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಅಂದು ಬೆಳಗಾವಿಗರ ನಿದ್ದೆಗೆಡಿಸಿದ್ದ ರಾಜು ಕಣಬರಕರ್ ಮೇಲೆ 2005 ನೇ ಇಸವಿಯಲ್ಲಿ ಇದೇ ದಿಟ್ಟ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಫೈರಿಂಗ್ ಮಾಡಿ ಎನ್ ಕೌಂಟರ್ ಮಾಡುವ ಮೂಲಕ ಬೆಳಗಾವಿಯ ಅಪರಾಧ ಲೋಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.

ಎಸಿಪಿ ನಾರಾಯಣ ಬರಮನಿ

ಅದೇ ರೀತಿ 2007ರ ಸೆಪ್ಟೆಂಬರ್‌ 6ರಂದು ಬೆಳಗಾವಿ ನಗರದ ಗಣೇಶಪುರದ ಬಂಗಲೆಯಲ್ಲಿ ಮತ್ತೊಂದು ಎನ್‌ಕೌಂಟರ್‌ ಆಗಿಹೋಗಿತ್ತು. ಆಗಲೂ ಇದೇ ಎಸಿಪಿ ನಾರಾಯಣ ಬರಮನಿ ಅವರ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿತ್ತು. ಕೊಲೆ, ಅತ್ಯಾಚಾರ, ಸುಲಿಗೆ ಸೇರಿದಂತೆ 38ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರವೀಣ್ ಶಿಂತ್ರೆ ಎಂಬ ಆರೋಪಿಯೊಬ್ಬ ಹತನಾಗಿದ್ದ. ಅಂದು ಇಡೀ ಬೆಳಗಾವಿಯೇ ಪ್ರವೀಣ್ ಶಿಂತ್ರೆ ಸಾವನ್ನು ಸಂಭ್ರಮಿಸಿತ್ತು. ಆ ಮೂಲಕ ಬೆಳಗಾವಿಯ ಕ್ರೈಂ ಲೋಕವನ್ನು ನಾರಾಯಣ ಬರಮನಿ ಸೈಲೆಂಟ್ ಮಾಡಿದ್ದರು.

ಇಂದು ಮೂರನೇ ಭಾರಿ ಈ ಅಧಿಕಾರಿಯ ಸರ್ವೀಸ್ ರಿವಾಲ್ವಾರ್ ನಿಂದ ಗುಂಡು ಹಾರಿದೆ… ಆದ್ರೆ ಆರೋಪಿಯ ಪ್ರಾಣಪಕ್ಷಿ ಮಾತ್ರ ಹಾರಿಲ್ಲಾ.. ಬದಲಾಗಿ ಮಾಡಿದ ತಪ್ಪಿಗೆ ಕಾಲಿಗೆ ಗುಂಡೇಟು ಬಿದ್ದು, ಜೀವನದಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳಲು ಆರೋಪಿಗೆ ಜೀವದಾನ ಸಿಕ್ಕಿದೆ. ಈ ಮೂಲಕ ಬೆಳಗಾವಿಯ ಪೊಲೀಸರು ಸಮಾಜದಲ್ಲಿ ಶಾಂತಿ ಕದಡಿ , ಕೊಲೆ, ಸುಲಿಗೆ, ದರೋಡೆ, ಸೇರಿದಂತೆ ಹಲವು ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುವ ಸಮಾಜಘಾತುಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬಿ.ಅಲರ್ಟ್…..!

error: Content is protected !!