ನವದೆಹಲಿ: ಸಂಸತ್ನ ಎರಡೂ ಸದನಗಳಲ್ಲಿ ಶುಕ್ರವಾರವೂ ಗದ್ದಲ ಜೋರಾಗಿ ನಡೆದಿದೆ. ಅದಾನಿ ಗ್ರೂಪ್ ಸಂಸ್ಥೆ ವಿರುದ್ಧ ಹಿಂಡನ್ಬರ್ಗ್ ರೀಸರ್ಚ್ ವರದಿ ಪ್ರಕಟವಾಗಿರುವ ವಿಚಾರ ಇಟ್ಟುಕೊಂಡು ವಿಪಕ್ಷಗಳು ಸಂಸತ್ನಲ್ಲಿ ಜೋರು ಪ್ರತಿಭಟನೆಗಳನ್ನು ಮಾಡಿ, ಅದಾನಿ ಕಂಪನಿಗಳ ವಿರುದ್ಧ ತನಿಖೆಗೆ ಆದೇಶ ಕೊಡಬೇಕು ಎಂದು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಒತ್ತಾಯ ಮುಂದುವರಿಸಿವೆ. ಇಂದು ಬೆಳಗ್ಗೆ ಕಲಾಪ ಆರಂಭಕ್ಕೆ ಮುನ್ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ಪ್ರಮುಖ ನಾಯಕರು ಸಭೆ ಸೇರಿ ಇವತ್ತಿನ ಕಾರ್ಯತಂತ್ರಗಳು ಹೇಗಿರಬೇಕೆಂದು ನಿರ್ಧಾರ ಮಾಡಿದ್ದರು. ಒಂದು ವೇಳೆ ಅದಾನಿ ವಿರುದ್ಧ ತನಿಖೆಗೆ ಸರ್ಕಾರ ಒಪ್ಪದಿದ್ದರೆ ಎರಡೂ ಸದನಗಳಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆಗಳನ್ನು ನಡೆಸುವುದು ಎಂದು ತೀರ್ಮಾನಿಸಲಾಗಿತ್ತು. ಅದರಂತೆಯೇ ಇಂದು ಕೂಡ ವಿಪಕ್ಷಗಳ ವಿವಿಧ ಸದಸ್ಯರು ಈ ವಿಚಾರದ ಬಗ್ಗೆ ಚರ್ಚೆಗೆ ಮನವಿಗಳನ್ನು ಮಾಡಿದರಾದರೂ ಸ್ಪೀಕರ್ ಪುರಸ್ಕಾರ ಸಿಗಲಿಲ್ಲ. ಬೆಳಗಿನ ಅವಧಿಯನ್ನು ಸದ್ಯ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.
ರಾಜ್ಯಸಭೆಯಲ್ಲಿ ಭಾರತ್ ರಾಷ್ಟ್ರ ಸಮಿತಿಯ ಸಂಸದ ಕೆ ಕೇಶವ ರಾವ್, ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಡಿಎಂಕೆ ಸಂಸದ ತಿರುಚಿ ಶಿವ, ಕಾಂಗ್ರೆಸ್ ಸಂಸದರಾದ ಪ್ರಮೋದ್ ತಿವಾರಿ, ಡಾ. ಸಯದ್ ನಾಸೀರ್ ಹುಸೇನ್, ಸಿಪಿಐಎಂ ಸಂಸದ ಇಳಮಾರಂ ಕರೀಮ್ ಅವರು ರೂಲ್ ನಂಬರ್ 267 ಅಡಿಯಲ್ಲಿ ನೋಟೀಸ್ ಜಾರಿ ಮಾಡಿದ್ದರು. ರಾಜ್ಯಸಭಾಧ್ಯಕ್ಷರು ಬೇರೆ ಬೇರೆ ಕಾರಣಗಳನ್ನು ನೀಡಿ ವಿಪಕ್ಷ ಸದಸ್ಯರ ಮನವಿ ತಿರಸ್ಕರಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮಾಣಿಕಂ ಠಾಗೂರ್ ಕೂಡ ಅಡ್ಜರ್ನ್ಮೆಂಟ್ ಮೋಶನ್ ನೋಟೀಸ್ ಕೊಟ್ಟು ಹಿಂಡಲ್ಬರ್ಗ್ ರೀಸರ್ಚ್ ವರದಿ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡುತ್ತಾರೆ. ಆದೂ ಕೂಡ ತಿರಸ್ಕೃತವಾಗುತ್ತದೆ. ಎರಡೂ ಸದನಗಳಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆಗಳನ್ನು ನಡೆಸಿದರು. ನಂತರ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಲಾದರೆ, ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಲಾಯಿತು.
ನಿನ್ನೆ ಗುರುವಾರ ಕೂಡ ಸಂಸತ್ತಿನ ಎರಡೂ ಸದನಗಳಲ್ಲಿ ಕಲಾಪ ಸರಿಯಾಗಿ ನಡೆಯಲಿಲ್ಲ. ವಿಪಕ್ಷಗಳು ಅದಾನಿ ಕಂಪನಿಗಳ ವಿರುದ್ಧ ತನಿಖೆ ಆಗಬೇಕೆಂದು ಹಿಡಿದ ಪಟ್ಟಿಗೆ ಸರ್ಕಾರ ಬಗ್ಗಲಿಲ್ಲ. ಇದರಿಂದ ವಿಪಕ್ಷ ಸದಸ್ಯರು ಗದ್ದಲ ನಡೆಸಿದರು. ಪರಿಣಾಮವಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಲಾಪಗಳನ್ನು ಬಹುತೇಕ ಇಡೀ ದಿನ ಸ್ಥಗಿತಗೊಳಿಸಲಾಯಿತು.
ಮೊನ್ನೆಯಷ್ಟೇ ಬಜೆಟ್ ಮಂಡನೆಯಾಗಿದ್ದು, ವಿಪಕ್ಷಗಳು ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ಬದಲು ಹಿಂಡನರ್ಬರ್ಗ್ ಅದಾನಿ ಪ್ರಕರಣವನ್ನು ಕೈಗೆತ್ತಿಕೊಂಡು ಸರ್ಕಾರಕ್ಕೆ ಚಾಟಿ ಬೀಸುವ ಪ್ರಯತ್ನ ಮಾಡುತ್ತಿದೆ. ಗೌತಮ್ ಅದಾನಿ ಮಾಲೀಕತ್ವದ ಕಂಪನಿಗಳು ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಕೆ ಮತ್ತು ಇಳಿಕೆ ಮಾಡಿ ವಂಚನೆ ಎಸಗಿದ್ದಾರೆ. ಅದಾನಿ ಗ್ರೂಪ್ ಕಂಪನಿಗಳ ಷೇರು ಮೌಲ್ಯ ವಾಸ್ತವದ್ದಲ್ಲ ಎಂದು ಹಿಂಡನ್ಬರ್ಗ್ ರೀಸರ್ಚ್ನ ವರದಿ ಹೇಳಿದೆ. ಈ ಸ್ಫೋಟಕ ವರದಿ ಬೆಳಕಿಗೆ ಬರುತ್ತಲೇ ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬೀಳತೊಡಗಿವೆ. ಪರಿಣಾಮವಾಗಿ ಲಕ್ಷಾಂತರ ಕೋಟಿಯಷ್ಟು ಹಣವನ್ನು ಅದಾನಿ ಕಳೆದುಕೊಂಡಿದ್ದಾರೆ.