ಬೆಳಗಾವಿ: ಬೆಳ್ಳಂಬೆಳಿಗ್ಗೆ ಬೆಳಗಾವಿಯಲ್ಲಿ ಜವರಾಯ ತನ್ನ ಅಟ್ಟಹಾಸ ಮೇರೆದಿದಿದ್ದಾನೆ. ಚಾಲಕನ ನಿರ್ಲಕ್ಷ್ಯಕ್ಕೆ ಕ್ರೂಸರ್ ವಾಹನ ಪಲ್ಟಿಯಾಗಿ ಏಳು ಜನ ದುರ್ಮರಣಕ್ಕಿಡಾಗಿದ್ದು, ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊರಟವರು ಮಸಣ ಸೇರಿದ್ದಾರೆ.
ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ ಏಳು ಜನ ಸ್ಥಳದಲ್ಲೇ ದುರ್ಮರಣ
ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊದವರು ತುಳಿದರು ಮಸಣದ ಹಾದಿ
ಜಿಲ್ಲಾಸ್ಪತ್ರೆ ಆವರಣದಲ್ಲಿ ಮಿಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ.. ಮೃತರ ಊರಲ್ಲಿ ಸ್ಮಶಾನ ಮೌನ
ಅವರೆಲ್ಲಾ ತುತ್ತಿನ ಚೀಲ ತುಂಬಿಕೊಳ್ಳಲು ಊರಿನಿಂದ ಪರ ಊರಿಗೆ ಹೋರಟಿದ್ದ ಕೂಲಿ ಕಾರ್ಮಿಕರು. ನಿತ್ಯ ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಿಂದ ಬೆಳಗಾವಿ ಸಮೀಪ ನಡೆಯುತ್ತಿರೋ ರೈಲ್ವೆ ಡಬ್ಲಿಂಗ್ ಕೆಲಸಕ್ಕೆ ಹೋಗಿ ಸಂಜೆ ವಾಪಸ್ಸಾಗುತ್ತಿದ್ದರು. ಆದರೆ ಈ ದುರ್ದೈವಿಗಳು ಇಂದು ಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ರೋ ಗೊತ್ತಿಲ್ಲ… ಮನೆಯಿಂದ ಹೋರಟ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಹೌದು… ಎಂದಿನಂತೆ ಇಂದು ಬೆಳಗಿನ ಜಾವ ಎದ್ದು ಊಟಕ್ಕೆ ಬುತ್ತಿ ಕಟ್ಟಕೊಂಡು, ಕೂಲಿ ಕೆಲಸಕ್ಕೆಂದು ಇವರೆಲ್ಲಾ ಕ್ರೂಸರ್ ವಾಹನ ಹತ್ತಿ ಬೆಳಗಾವಿ ಕಡೆಗೆ ಹೊರಟ್ಟಿದ್ದರು. ಬರೋಬ್ಬರಿ 18 ಜನ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಕ್ರೂಸರ್, ಬೆಳಗಾವಿ ತಾಲೂಕಿನ ಕಲ್ಯಾಳ ಬ್ರಿಡ್ಜ್ ಬಳಿ, ಬ್ರಿಡ್ಜ್ ಗೆ ಡಿಕ್ಕಿ ಹೊಡೆದು, ಎರಡು ಪಲ್ಟಿ ಹೊಡೆದಿದೆ. ಪರಿಣಾಮ ವಾಹನದಲ್ಲಿದ್ದ ಏಳು ಜನ ಕಾರ್ಮಿಕರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನು ಮೃತರನ್ನು ಅಕ್ಕತಂಗಿಯರಹಾಳ್ ಗ್ರಾಮದ ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22) ಮತ್ತು ದಾಸನಹಟ್ಟಿ ಗ್ರಾಮದ ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30) ಮಲ್ಲಾಪುರ ಗ್ರಾಮದ ಬಸವರಾಜ್ ಸನದಿ (40) ಎಂದು ಗುರುತಿಸಲಾಗಿದೆ.
ಇನ್ನು ನಿತ್ಯ ಮೂರು ಕ್ರೂಸರ್ ವಾಹನಗಳಲ್ಲಿ ಈ ಕೂಲಿ ಕಾರ್ಮಿಕರನ್ನು ಬೆಳಗಾವಿಯತ್ತ ಬರುತ್ತಿದ್ರು. ಆದ್ರೆ ಇಂದು ಮುಂಜಾನೆ 8.30 ರ ಸುಮಾರಿಗೆ ಮೂರು ಕ್ರೂಸರ್ ಗಳ ಚಾಲಕರು ಪೈಪೋಟಿಯೆಂಬಂತೆ ನಾ ಮುಂದು.. ತಾ ಮುಂದು ಎಂದು ಅಮಾಯಕರ ಜೀವ ಲೆಕ್ಕಿಸದೇ ಓವರ್ ಸ್ಪೀಡ್ ನಲ್ಲಿದ್ದಾಗ, ಅಪಘಾತಕ್ಕಿಡಾದ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕ್ರೂಸರ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ವಾಹನದಲ್ಲಿದ್ದ ಇನ್ನುಳಿದ 11 ಜನರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಕಾರಣವಾದ ಕ್ರೂಸರ್ ಚಾಲಕ ಬದುಕುಳಿದಿದ್ದು, ಆತನ ವಿರುದ್ದ ಪ್ರಕರಣ ದಾಖಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಬೆಳಗಾವಿ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯ, ಪರಿಸ್ಥಿತಿ ಅವಲೋಕಿಸಿದ್ದಾರೆ.
ಇನ್ನು ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಮೃತರ ಹಾಗು ಗಾಯಾಳುಗಳ ಸಂಬಂಧಿಕರು ಬೆಳಗಾವಿ ಜಿಲ್ಲಾಸ್ಪತ್ರೆಯತ್ತ ಧಾವಿಸಿದ್ದು, ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಇದೇ ಸಂದರ್ಭದಲ್ಲಿ ಖಾಸಗಿ ಕಾರ್ಯಕ್ರಮಕ್ಕೆಂದು ಸಿಎಂ ಬಸವರಾಜ್ ಬೊಮ್ಮಾಯಿ ಬೆಳಗಾವಿಗೆ ಬಂದಿದ್ದು, ಮೃತರ ಕುಟುಂಬಕ್ಕೆ ಮಾದ್ಯಮಗಳ ಮೂಲಕ ಸಾಂತ್ವನ ಹೇಳಿ, ಮೃತರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ, ಜಿಲ್ಲಾಧಿಕಾರಿ ನಿಧಿಯಿಂದ ಎರಡು ಲಕ್ಷ ಮತ್ತು ಕಾರ್ಮಿಕ ಇಲಾಖೆಯಿಂದ ಐದು ಲಕ್ಷ ಒಟ್ಟು ತಲಾ ಹನ್ನೆರಡು ಲಕ್ಷ ಪರಿಹಾರ ಘೋಷಿಸಿದ್ದಾರೆ. ಆದ್ರೆ ಈ ಸಂದರ್ಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಜಿಲ್ಲಾಸ್ಪತ್ರೆ ಬಳಿ ದಾಟಿ ಹೋದರೂ, ಆಸ್ಪತ್ರೆ ಬಳಿ ತೆರಳಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕನಿಷ್ಟ ಮಾನವಿಯತೆಯನ್ನು ತೋರದಿರುವುದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಯಿತು.
ಒಟ್ಟಿನಲ್ಲಿ ಇಡೀ ದಿನ ಬೇವರು ಸುರಿಸಿ ಮನೆಯವರ ಹೊಟ್ಟೆ ಹೊರೆಯುತ್ತಿದ್ದ ಯಜಮಾನ, ಭೀಕರ ಅಪಘಾತದಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದು, ಕುಟುಂಬಸ್ಥರಿಗೆ ವರದಿ ಸಕಲ ಬಡಿದಂತಾಗಿದೆ. ಮೃತರ ಊರು ಅಕ್ಕತಂಗೇರಹಾಳ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಸ್ಮಶಾನ ಮೌನ ಆವರಿಸಿದೆ.