ಕಾರವಾರ: ಕೋವಿಡ್ ಲಸಿಕೆ ಪಡೆದು ಅರ್ಧ ಗಂಟೆ ವಿಶ್ರಾಂತಿ ಪಡೆದಿದ್ದ ವ್ಯಕ್ತಿಯೊರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾದಲ್ಲಿ ಲಸಿಕೆ ಪಡೆದ ಬಳಿಕ ಮಾತ್ರೆ ಪಡೆದುಕೊಳ್ಳಲು ತೆರಳುತ್ತಿದ್ದಾಗ ಅಸ್ವಸ್ಥಗೊಂಡು ಈ ಸಾವು ಸಂಭವಿಸಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂತ್ರಿ ಗ್ರಾಮದ ನಿವಾಸಿ ಮಾದೇವ್ ಪುಟ್ಟು ನಾಯ್ಕ್ (67) ಮೃತ ದುರ್ದೈವಿಯಾಗಿದ್ದಾರೆ.
ಇಂದು ಬೆಳಗ್ಗೆ 11.05ಕ್ಕೆ ಪತ್ನಿಯೊಂದಿಗೆ ವ್ಯಾಕ್ಸಿನ್ ತೆಗೆದುಕೊಂಡಿದ್ದ ಮಾದೇವ ನಾಯ್ಕ್, ವಿಶ್ರಾಂತಿ ಪಡೆದುಕೊಂಡು ನಂತರ ಮಾತ್ರೆ ತರಲು ಹೊರಟಿದ್ದರು. ಮಾತ್ರೆ ತೆಗೆದುಕೊಳ್ಳಲು ತಾಲೂಕಾ ಆಸ್ಪತ್ರೆಗೆ ತೆರಳುತ್ತಿದ್ದಾಗ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಹೃದಯಾಘಾತಕ್ಕೆ ಒಳಗಾಗಿದ್ದ ಮಾದೇವರನ್ನು ಐಸಿಯುಗೆ ದಾಖಲಿಸಲಾಗಿತ್ತು. ವೈದ್ಯರ ಶತಪ್ರಯತ್ನದ ನಡುವೆಯೂ ಮಾದೇವ ನಾಯ್ಕ್ ಚಿಕಿತ್ಸೆ ಫಲಿಸದೆ ಸಾವಿಗಿಡಾಗಿದ್ದಾರೆ. ಹೃದಯಾಘಾತದಿಂದ ಮಾದೇವ್ ಸಾವಿಗೀಡಾಗಿರುವ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ನಿತಿನ್ ಹೊಸ್ಮೇಳಕರ್ ಮಾಹಿತಿ ನೀಡಿದ್ದಾರೆ.
ಇನ್ನು ಮಾದೇವ ಅವರ ಸಾವಿನ ಬಳಿಕ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಆದರೆ, ವೈದ್ಯರು, ಪೊಲೀಸ್ ನೀರಿಕ್ಷಕ ಕೃಷ್ಣಾನಂದ ನಾಯ್ಕ್, ಪಿಎಸ್ಐ ಪ್ರೇಮನಗೌಡ ಪಾಟೀಲ್ ಮತ್ತು ಮೃತನ ಕುಟುಂಬಸ್ಥರು ಚರ್ಚಿಸಿದ ಬಳಿಕ ವಾತಾವರಣ ತಿಳಿಗೊಂಡಿದೆ. ಸಾವಿಗೀಡಾಗಿದ್ದ ಮಾದೇವ್ ನಾಯ್ಕ್ ಈ ಹಿಂದೆಯೇ ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದು, ಮೃತ ಮಾದೇವ ಜೊತೆ ಲಸಿಕೆ ಪಡೆದಿದ್ದ 9 ಮಂದಿಗೆ ಯಾವುದೇ ಸಮಸ್ಯೆಯಾಗಿಲ್ಲ.