ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 9 ಬ್ಲ್ಯಾಕ್ ಫಂಗಸ್ ಕೇಸ್ ಗಳು ಪತ್ತೆಯಾಗಿವೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅದೇ ರೀತಿ ಎರಡು ವೈಟ್ ಫಂಗಸ್ ಕೇಸ್ ಗಳು ದೃಢಪಟ್ಟಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.
ರವಿವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಎಚ್ಓ ಡಾ.ಶಶಿಕಾಂತ ಮುನ್ಯಾಳ ಕೋವಿಡ್ 2ನೇ ಅಲೆ ನಂತರ ಕಳೆದ 15 ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ ಗಳು ಬರುತ್ತಿವೆ. ಸುಮಾರು 9 ಕೇಸ್ ಗಳು ಬೆಳಗಾವಿ ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಎರಡು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿವೆ. ಕೋವಿಡ್ ಚಿಕಿತ್ಸೆಯ ಉಪಚಾರದಿಂದ ಆಗುವ ಅಡ್ಡಪರಿಣಾಮಗಳಲ್ಲಿ ಇದೊಂದು. ಆಕ್ಸಿಜನ್ ಪೈಪ್ ಲೈನ್ ನಲ್ಲಿ ಸಾಂಸರ್ಗಿಕ ನೀರು ಹಾಗೂ ಅಸಮರ್ಪಕ ನೀರಿನ ಬಳಕೆಯಿಂದಲೂ ಉಂಟಾಗುತ್ತಿದೆ. ರೋಗಿಗಳಿಗೆ ಹಾಕಿದ ಪೈಪ್ ಲೈನ್ ನ್ನು 48 ಗಂಟೆಗಳಲ್ಲಿ ಬದಲಾಯಿಸಬೇಕಾಗುತ್ತದೆ. ಮಾಸ್ಕನ್ನು ಪ್ರತಿನಿತ್ಯ ಬದಲಾಯಿಸಬೇಕು. ಬಿಸಿ ನೀರಿನಲ್ಲಿ ತೊಳೆಯಬೇಕು. ಬಿಸಿಲಿನಲ್ಲಿ ಒಣಗಿಸಿ ಸ್ವಚ್ಛವಾದ ಬಟ್ಟೆಯ ಮಾಸ್ಕ್ ನ್ನು ಬಳಸಬೇಕು. ಎರಡು- ಮೂರು ದಿನ ಒಂದೇ ಮಾಸ್ಕ್ ಉಪಯೋಗಿಸುವುದರಿಂದ ಬೆವರಿನ ಪ್ರಮಾಣ ಅಥವಾ ಇನ್ನಿತರ ತೇವಾಂಶ ಹೆಚ್ಚಾಗಿ ಫಂಗಸ್ ಬೆಳವಣಿಗೆಯಾಗುತ್ತಿದೆ.
ಆಹಾರ ಪದಾರ್ಥವನ್ನು ಒಂದೇ ಸ್ಥಳದಲ್ಲಿ 24 ಗಂಟೆ ಇಟ್ಟರೆ ಅವುಗಳಲ್ಲಿ ಸ್ಪಂಜ್ ತರಹ ಫಂಗಸ್ ಬೆಳೆಯುತ್ತದೆ. ಸಾಮಾನ್ಯವಾಗಿ ಫಂಗಸ್ ಎಲ್ಲಾ ಕಡೆ ಇರುತ್ತದೆ ಎಂದು ಹೇಳಿದರು. ಇನ್ನು ವೃದ್ಧ ರೋಗಿಗಳಿಗೆ ಮಾಸ್ಕ್, ಸ್ಟಿರೈಡ್, ಆಕ್ಸಿಜನ್ ಬಳಕೆ ಹಾಗೂ ಶುಗರ್ ಇದ್ದ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಕಂಡು ಬರುತ್ತಿದೆ. ಉತ್ತಮ ಚಿಕಿತ್ಸೆಯ ಜೊತೆಗೆ ನಾವು ಕೂಡ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಶುಗರ್ ನಿಯಂತ್ರಿಸಿದ್ರೆ ಬ್ಲ್ಯಾಕ್ ಫಂಗಸ್ ತಡೆಗಟ್ಟಬಹುದು. ಇನ್ನು 70 ವರ್ಷ ಮೇಲ್ಪಟ್ಟ ಗೋಕಾಕ್ ಮತ್ತು ಅಥಣಿಯಲ್ಲಿ ತಲಾ ಒಬ್ಬರು ಬ್ಲ್ಯಾಕ್ ಫಂಗಸ್ ನಿಂದ ಸಾವನ್ನಪ್ಪಿದ್ದಾರೆ. ಇನ್ನುಳಿದವರು ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ನಿರ್ಧಾರ ಪಡಿಸಿದಂತೆ ರಾಜ್ಯದ ಆರು ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗಳಲ್ಲಿ ಫಂಗಸ್ ಗೆ ಚಿಕಿತ್ಸೆ ನೀಡುವ ವ್ಯವಸ್ಥೆ ನಡೆದಿದೆ. ಅದೇ ರೀತಿ ಬಿಮ್ಸ್ ಆಸ್ಪತ್ರೆಯಲ್ಲಿಯೂ ಫಂಗಸ್ ಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು. ವಾತಾವರಣದಲ್ಲಿ ಬ್ಲ್ಯಾಕ್ ಹಾಗೂ ವೈಟ್ ಎರಡೂ ಫಂಗಸ್ ಗಳಿವೆ ಅದರ ಲಕ್ಷಣಗಳ ಆಧಾರದ ಮೇಲೆ ಗುರುತಿಸಲಾಗುತ್ತದೆ.
ಶೇ.60-70 ರಷ್ಟು ಬ್ಲ್ಯಾಕ್ ಫಂಗಸ್ ಇದ್ದರೆ, ಶೇ.30-40 ರಷ್ಟು ವೈಟ್ ಫಂಗಸ್ ಇದೆ. ನಮ್ಮಲ್ಲಿ ಜಾಸ್ತಿ ಬ್ಲ್ಯಾಕ್ ಫಂಗಸ್ ಕಂಡು ಬರುತ್ತಿದ್ದು, ಎರಡು ವೈಟ್ ಫಂಗಸ್ ಕೇಸ್ ಗಳು ಪತ್ತೆಯಾಗಿವೆ. ಬೈಯಾಕ್ಸಿ ಮತ್ತು ಪೋಟ್ಯಾಶಿಯಂ ಹೈಡ್ರಾಕ್ಸೈಡ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದರೆ ಫಂಗಸ್ ಎಂದು ಗುರುತಿಸಲಾಗುತ್ತಿದೆ ಎಂದು ಹೆಚ್ಚಿನ ಮಾಹಿತಿ ನೀಡಿದರು. ಇನ್ನು ಗ್ರಾಮೀಣ ಭಾಗದಲ್ಲಿ ಸರಿಯಾಗಿ ಔಷಧಿ ಪೂರೈಸಲು ಆಗುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಯಿಸಿದ ಡಿಎಚ್ಓ ಡಾ.ಎಸ್.ವ್ಹಿ.ಮುನ್ಯಾಳ ಬೇಡಿಕೆ ಪ್ರಮಾಣದಲ್ಲಿ ಹೆಚ್ಚಾಗಿದ್ದರಿಂದ ಸ್ವಲ್ಪ ಸಮಸ್ಯೆ ಉಂಟಾಗಿದೆ. ಬರುವ ಮೂರು ದಿನಗಳಲ್ಲಿ ಸಮರ್ಪಕವಾಗಿ ಮಾತ್ರೆಗಳನ್ನು ತಲುಪಿಸುವ ಕೆಲಸ ಮಾಡುತ್ತೇವೆ. ಗ್ರಾಮೀಣ ಭಾಗದಲ್ಲಿ ಸೋಂಕಿತರು ಹೆಚ್ಚಾಗಿದ್ದು, ಹೋಮ್ ಐಸೋಲೇಶನ್ ಇದ್ದವರನ್ನು ಕೋವಿಡ್ ಕೇರ್ ಸೆಂಟರ್ ಗೆ ಕಳಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು. ಒಟ್ಟಾರೆ ಬ್ಲ್ಯಾಕ್ ಫಂಗಸ್ ಹಾಗೂ ವೈಟ್ ಫಂಗಸ್ ತಡೆಗಟ್ಟಲು ಇರುವ ವಿಧಾನಗಳನ್ನು ಡಿಎಚ್ಓ ಡಾ.ಎಸ್.ವ್ಹಿ.ಮುನ್ಯಾಳ ತಿಳಿಸಿದ್ರು.