ಚಿಕ್ಕಬಳ್ಳಾಪುರ: ಕುಂಟೆಯ ನೀರಿನಲ್ಲಿ ಮುಳುಗಿ ನಾಲ್ಕು ಜನ ಬಾಲಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಸಜ್ಜುವಾರಪಲ್ಲಿ ಗ್ರಾಮದ ಬಳಿ ನಡೆದಿದೆ. ಮೃತ ಬಾಲಕರನ್ನು ಸಾಲಮಾಕಲಪಲ್ಲಿ ಗ್ರಾಮದ 12 ವರ್ಷದ ವರುಣ್, 11 ವರ್ಷದ ಸಂತೋಷ್, ಊದವಾರಪಲ್ಲಿ ಗ್ರಾಮದ 11 ವರ್ಷದ ಮಹೇಶ್ ಹಾಗೂ ಆಂದ್ರದ ಗಡಿ ಗ್ರಾಮ ವಡ್ಲವಾಂಡ್ಲಪಲ್ಲಿ ಗ್ರಾಮದ 13 ವರ್ಷದ ಬದರಿನಾಥ್ ಎಂದು ತಿಳಿದುಬಂದಿದೆ.
ಮೃತರೆಲ್ಲರೂ 5 ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳಿಗಳಾಗಿದ್ದಾರೆ. ಊದವಾರಪಲ್ಲಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ಮೂವರು ಮಕ್ಕಳನ್ನು ನಿನ್ನೆ ಮಧ್ಯಾಹ್ನ ಆಟವಾಡಲು ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಹಸು- ಕುರಿಗಳನ್ನ ಮೇಯಿಸಲು ಕರೆದುಕೊಂಡು ಹೋಗಿದ್ದರು. ತುಂಬಾ ಬಿಸಿಲು ಇದ್ದ ಕಾರಣಕ್ಕೆ ಹಸುಗಳನ್ನ ಕಟ್ಟಿಹಾಕಿ ಅಲ್ಲಿಯೇ ಸಮೀಪದಲ್ಲಿದ್ದ ಕುಂಟೆಯ ಹೊಂಡದಲ್ಲಿ ತುಂಬಿದ್ದ ನೀರಿನಲ್ಲಿ ನಾಲ್ಕು ಜನ ಬಾಲಕರು ಈಜಲು ನೀರಿಗಿಳಿದ್ದಾರೆ. ಆದ್ರೆ ಈಜು ಬಾರದೆ ಎಲ್ಲರೂ ನೀರಿನಲ್ಲಿ ಮುಳುಗಿದ್ರೆ, ಇನ್ನು ಕೆಲವರು ನೀರಿನ ಒಳಗೆ ಕೆಸರಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚೇಳೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆಗಿಳಿದು ಕುಂಟೆಯಲ್ಲಿದ್ದ ನೀರನ್ನು ಹೊರ ಹಾಕಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಘಟನೆಯಿಂದ ಮೃತ ಬಾಲಕರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಚೆಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.