ಲೋಕಸಭಾ ಚುನಾವಣೆ ಹಿನ್ನೆಲೆ ದಾಖಲೆ ಇಲ್ಲದ ಒಂದು ಕೋಟಿ ರೂ ವಶಕ್ಕೆ ಪಡೆದ ಮಂಡ್ಯ ಪೊಲೀಸರು.
ಮಂಡ್ಯ: ಮಂಡ್ಯ ಜಿಲ್ಲೆಯ ಗಡಿಭಾಗದ ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಬಳಿಯಲ್ಲಿ ಕಾರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ ಅಂದಾಜು 1 ಕೋಟಿ ರೂ. ಹಣವನ್ನು ಚುನಾವಣಾ ಸಿಬ್ಬಂದಿ ಮತ್ತು ಮದ್ದೂರು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕಡೆಗೆ ಹೊರಟಿದ್ದ ಕ್ರೇಟಾ ಕಾರನ್ನು ತಡೆದ ಚುನಾವಣಾ ಚೆಕ್ ಪೋಸ್ಟ್ ಅಧಿಕಾರಿಗಳು, ತಪಾಸಣೆ ನಡೆಸಿದಾಗ ಅಂದಾಜು ಒಂದು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.
ಗಿರೀಶ್ ಎಂಬುವವರು ಬೆಂಗಳೂರಿನಿಂದ ಹ್ಯೂಂಡಾಯ್ ಕ್ರೇಟಾ KA54 -M-4030 ಕಾರಿನಲ್ಲಿ ಕೆ.ಆರ್.ಪೇಟೆ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ ಮದ್ದೂರು ತಾಲೂಕಿನ ಗಡಿಭಾಗ ಕೊಂಗಬೋರನದೊಡ್ಡಿ ಗ್ರಾಮದ ಬಳಿ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ತಹಶೀಲ್ದಾರ್ ಕೆ.ಎಸ್.ಸೋಮಶೇಖರ್, ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಆರ್.ಪ್ರಸಾದ್ ಹಾಗೂ ಚುನಾವಣಾಧಿಕಾರಿ ಲೋಕನಾಥ್ ಹಾಗೂ ಪೋಲೀಸ್ ಸಿಬ್ಬಂದಿ ಕಾರನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಹಣವನ್ನು ತುಂಬಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಈ ಬಗ್ಗೆ ಅವರನ್ನು ಚುನಾವಣಾಧಿಕಾರಿಗಳು ಪ್ರಶ್ನಿಸಿದಾಗ, ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ಉತ್ತರ, ದಾಖಲೆ ನೀಡದ ಕಾರಣ ಹಣವನ್ನು ಸೀಜ್ ಮಾಡಿದ್ದಾರೆ. ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.