–ದೀಪಕ ಶಿಂಧೇ
ಕೆಲವರು ಹಣ ಹೆಂಡ ಸೀರೆಗೆ ವೋಟು ಮಾರಿಕೊಳ್ಳುತ್ತಾರೆ. ಇನ್ನುಳಿದವರು ಪ್ರತಿಷ್ಟೆಗಾಗಿ ಮನುಷ್ಯತ್ವವನ್ನೂ ಮಾರಿಕೊಳ್ಳುತ್ತಾರೆ. ಅಂಥವರಿಗೆ ಹೇಳುವದಾದರೂ ಏನಿದೆ ಮಾಮೂಲಿ ಮಾತಿನಲ್ಲಿ??
ಈಗೀಗ ಭಾವನೆಗಳ ಜೊತೆ ಆಟ ಆಡುವವರೇ ಹೆಚ್ಚಾಗಿದ್ದಾರೆ ಇಲ್ಲಿ. ಜೂಜಾಟದಲ್ಲಿ ಪಾಂಚಾಲಿಯ
ಪಣಕ್ಕಿಟ್ಟ ಕಥೆಗಳೇ ಹಿಡಿಸುತ್ತವೆ ಅವರಿಗೆ. ಊರ ಉಸಾಬರಿ ಮಾಡದಿದ್ದರೆ ಪಾಪ ತಿಂದ ಅನ್ನವೂ ಅರಗಲಿಕ್ಕಿಲ್ಲ ಅಂಥವರಿಗೆ ಹೇಳುವದಾದರೂ ಏನಿದೆ ಮಾಮೂಲಿ ಮಾತಿನಲ್ಲಿ..
ಒಬ್ಬರ ತುಳಿದು, ನಿಂದಿಸಿ, ಅಪಮಾನ ಮಾಡಿ ಚುಚ್ಚು ಮಾತುಗಳನ್ನಾಡಿ ಬದುಕುವದೇ ಶ್ರೇಷ್ಠ ಎಂದುಕೊಂಡವರಿಗೆ ಹೇಳುವದಾದರೂ ಏನಿದೆ ಮಾಮೂಲಿ ಮಾತಿನಲ್ಲಿ??
ಮತ್ತೊಬ್ಬರ ಸ್ನಾನದ ನೀರಲ್ಲೇ ಎರೆದುಕೊಳ್ಳುತ್ತಾರೆ ಅವರೆಲ್ಲ… ಹೌದು ಬಿಡಿ ಬಾಯಿ ತೆಗೆದರೆ
ಕೊಳಕು ಮಂಡಲ ಹಾವಿನ ಹಾಗೆ ವಿಷವನ್ನೇ ಉಸುರುತ್ತಾರೆ ಅಂಥವರಿಗೆ ಹೇಳುವದಾದರೂ ಏನಿದೆ ಮಾಮೂಲಿ ಮಾತಿನಲ್ಲಿ??
ನಂಜು ಹೊತ್ತಿಸಿ ನಗುವ
ಜನರಿದ್ದಾರೆ ಇಲ್ಲಿ.. ನಾನು ತೆರೆದಿಟ್ಟ ಪುಸ್ತಕವಷ್ಟೇ..
ತಪ್ಪು ನನ್ನಿಂದಲೂ ಆಗಿರಬಹುದು ಆದರೆ
ಎಲ್ಲರ ಮನೆಯ ತಾಯಿ, ತಂಗಿ, ಅಕ್ಕ ನನಗೂ ಅಷ್ಟೇ…ಇನ್ನೊಬ್ಬರ ಬಗ್ಗೆ ಕೀಳು ಕಥೆಗಳ ಕಟ್ಟುವವರಿಗೆ ಹೇಳುವದಾದರೂ ಏನಿದೆ ಮಾಮೂಲಿ ಮಾತಿನಲ್ಲಿ??
ಮಾನ, ಪ್ರಾಣದ ಪ್ರಶ್ನೆ ಬಂದಾಗ ಸಿಟ್ಟು ಸೆಡವು ನನ್ನಲ್ಲೂ ಹುಟ್ಟಿಕೊಳ್ಳುತ್ತದೆ. ಹಗೆಯ ಸಾಧಿಸುವದಿಲ್ಲ ನಾನು ಕನ್ನಡಿಯನ್ನಷ್ಟೇ ಹಿಡಿಯುತ್ತೇನೆ. ಅವರವರ ಮುಖಗಳನ್ನವರು ನೋಡಿ ಕೊಳ್ಳಲಿ ಅಷ್ಟೇ…
ಎಷ್ಟು ಏನೆಲ್ಲ ತಿಳಿಸಿ ಹೇಳಿದರೂ ಸುಧಾರಿಸಿಕೊಳ್ಳದವರಿಗೆ ಹೇಳುವದಾದರೂ ಏನಿದೆ
ಮಾಮೂಲಿ ಮಾತಿನಲ್ಲಿ??