ಹಾಸನ: ಹಾಸನ ಜಿಲ್ಲೆಯಲ್ಲಿ ಸಿಎಂ ಆಪ್ತರಿಬ್ಬರ ಮುಸುಕಿನ ಗುದ್ದಾಟ ಜೋರಾಗಿಯೇ ನಡೆದಿದೆ. ಅರಸೀಕೆರೆ ಕ್ಷೇತ್ರದಲ್ಲಿ ಟಿಕೇಟ್ ಗಾಗಿ ಪೈಪೋಟಿ ಈಗಿನಿಂದಲೆ ಆರಂಭವಾದಂತಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಹಾಗೂ ಮತ್ತೋರ್ವ ಸಿಎಂ ಆಪ್ತ ಮರಿಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಸಂತೋಷ್ ವಿರುದ್ಧ ಪ್ರತಿಭಟನೆ ಮೂಲಕ ಸ್ವಪಕ್ಷೀಯರ ಕಲಹ ಬೀದಿಗೆ ಬಿದ್ದಿದೆ.
ಏಕಾ ಏಕಿ ಕ್ಷೇತ್ರಕ್ಕೆ ಬಂದು ನಿಷ್ಠಾವಂತ ಕಾರ್ಯಕರ್ತರನ್ನ ಕಡೆಗಣನೆ ಮಾಡುತ್ತಿರೋ ಆರೋಪವನ್ನು ಸಂತೊಷ್ ವಿರುದ್ಧ ಮಾಡಿ, ಎರಡು ದಿನಗಳ ಹಿಂದೆಯೇ ನೂರಾರು ಬಿಜೆಪಿಗರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಗೋ ಬ್ಯಾಕ್ ಸಂತೋಷ್ ಎಂದು ಮೆರವಣಿಗೆ ಮಾಡಿದ್ದ ಸಂತೋಷ್ ವಿರೋಧಿ ಬಣದ ಕಾರ್ಯಕರ್ತರು ಪಕ್ಷದ ಆಂತರಿಕ ಕಲಹವನ್ನ ಬೀದಿಗೆ ತಂದಿದ್ರು. ಇವೆಲ್ಲ ಪ್ರಹಸನಗಳನ್ನು ಗಮನಿಸಿದ್ರೆ ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಟಿಕೆಟ್ ಗಾಗಿ ಈ ನಾಯಕರ ನಡುವೆ ಈಗಿನಿಂದಲೇ ಫೈಟ್ ಆರಂಭವಾಗಿರೋದು ಸ್ಪಷ್ಟವಾಗುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಮರಿಸ್ವಾಮಿ ಹಾಗೂ ಮುಂದಿನ ಚುನಾವಣೆ ಟಿಕೇಟ್ ಆಕಾಂಕ್ಷಿ ಸಂತೋಷ್ ನಡುವೆ ಈ ಫೈಟ್ ನಡೆದಿದ್ದು, ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಿವಿಟಿ ಬಸವರಾಜ್ ಹೆಸರು ಅಧ್ಯಕ್ಷರಾಗಿ ಅಂತಿಮಗೊಂಡಿತ್ತು.
ಆ ಹೆಸರನ್ನ ಬದಲಾಯಿಸಿ ಸಂತೋಷ್ ಆಪ್ತರನ್ನ ಆ ಹುದ್ದೆಗೆ ನಿಯೋಜನೆ ಮಾಡಿಸಲು ತಂತ್ರ ಮಾಡಿದ್ದಾರೆ ಎಂದು ನೇರವಾಗಿಯೇ ಸಂತೋಷ್ ವಿರುದ್ಧ ಕೆಲ ಬಿಜೆಪಿ ನಾಯಕರು ಹೋರಾಟಕ್ಕೆ ಇಳಿದಿದ್ದಾರೆ. ತಾನೇ ಮುಂದಿನ ವಿಧಾನಸಭಾ ಚುನಾವಣಾ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಓಡಾಡುತ್ತಿರೋ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ನಡೆಯಿಂದ ಕೆರಳಿದ ಕೆಲ ಬಿಜೆಪಿ ನಾಯಕರಿಂದ ರಾಜ್ಯ ನಾಯಕರಿಗೆ ದೂರು ಕೂಡ ನೀಡಲಾಗಿದೆ.