ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಬುಧವಾರ ಚಾಲನೆ ನೀಡಿದರು. ಕ್ಷೇತ್ರ ವ್ಯಾಪ್ತಿಯ ಪಟ್ಟಣಕುಡಿ ಗ್ರಾಮದ ಸಾರ್ವಜನಿಕರ ಹಲವು ಬೇಡಿಕೆಗಳಿಗೆ ಸ್ಪಂದಿಸಿರುವ ಗಣೇಶ ಹುಕ್ಕೇರಿ, ಅವುಗಳಿಗೆ ಸರಕಾರದಿಂದ ಮಂಜೂರಾತಿ ಪಡೆದು ಕೆಲಸಕ್ಕೆ ಚಾಲನೆ ನೀಡಿದರು. ಪಟ್ಟಣಕುಡಿ ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾದ ಶ್ರೀಪದ್ಮಾವತಿ ಕೆರೆ ತುಂಬುವ ಯೋಜನೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ಆರಂಭಿಸಲಾಯಿತು. 4 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ 10 ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ 5 ಲಕ್ಷ ರೂ. ವೆಚ್ಚದಲ್ಲಿ ಪದ್ಮಾವತಿ ಕೆರೆತುಂಬುವ ಯೋಜನೆಯನ್ನು ಆರಂಭಿಸಿದರು.
ಈ ವೇಳೆ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ, ಸಂಸದ ಪ್ರಕಾಶ ಹುಕ್ಕೇರಿ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಟ್ಟಣಕುಡಿ ಗ್ರಾಮದ ಪದ್ಮಾವತಿ ಕೆರೆ ತುಂಬುವ ಯೋಜನೆಯು ಬಹು ಜನರ ಬೇಡಿಕೆಯದಾಗಿತ್ತು. ಈ ಯೋಜನೆಯಿಂದ ವಾಳಕಿ, ಪಟ್ಟಣಕುಡಿ, ರಾಂಪೂರ ಗ್ರಾಮದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಸರಕಾರ ಯಾವುದೇ ಇದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಿರಂತರವಾಗಿ ನಡೆಯಲಿದೆ. ಯಾವುದೇ ಪಕ್ಷ, ಜಾತಿ ಬೇಧವಿಲ್ಲದೆ ಕ್ಷೇತ್ರವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಜನರ ಸಹಕಾರಿ, ಪ್ರೋತ್ಸಾಹವೇ ಕಾರಣವಾಗಿದೆ ಎಂದು ಅವರು ಹೇಳಿದರು. ಈ ಸಂಧರ್ಭದಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಕಾಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿದ್ಯಾಧರ ಕಾಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.