-ದೀಪಕ ಶಿಂಧೇ
ಈ ಮಳೆ ಎಂದರೆ ತುಂಬಾ ಇಷ್ಟ ನನಗೆ ಸುಮ್ಮನೆ ತೋಯಿಸಿಕೊಳ್ಳುತ್ತೇನೆ. ಗಂಡಸರು ಅಳಬಾರದೆಂಬ
ಅಲಿಖಿತ ಒಪ್ಪಂದಗಳಿವೆ ಇಲ್ಲಿ.
ಈಗೀಗ ನಿನ್ನ ದ್ವೇಷದ ಕಾರಣಗಳೂ ಬೇಕಿಲ್ಲ ನನಗೆ. ಇಲ್ಲಿ ಯಾರೂ ಯಾವುದೂ ಶಾಸ್ವತವಲ್ಲ ಅಂದಮೇಲೆ. ನಿನ್ನ ಇಷ್ಟು ದಿನದ ದ್ವೇಷಕ್ಕೂ ಋಣಿಯಾಗಿದ್ದೇನೆ ನಾನು.
ಭಾವನೆಗಳಿಂದ ಇಲ್ಲಿ ಯಾರೂ ಬರಿದಾಗಿಲ್ಲ… ಅನ್ನುವ ಮಾತಿಗೆ ಸಾಕ್ಷಿಯಾಗುತ್ತೇನೆ ನಾನು. ಈ ಹಾಳು ಮಳೆಯಲ್ಲೇ… ಹನಿಗೂಡುವ ಕಣ್ಣುಗಳ
ತೋಯಿಸಿಕೊಳ್ಳುತ್ತೇನೆ ನಾನು
ಮುಗಿದ ಮಾತು ಉಳಿದ ಮೌನಗಳೇ ಆಸ್ತಿಯಾಗಿರುವಾಗ ರೇಜಿಗೆ ಹುಟ್ಟಿಸುವ ಮಳೆಯೂ
ಆಪ್ತವಾಗುತ್ತದೆ ನನಗೆ.
ಹೌದು ಶತ್ರುವಿನ ಶತ್ರುವೂ ಮಿತ್ರನಾಗುತ್ತಾನೆ ಇಲ್ಲಿ.
ಆದರೆ ರಾಗ ದ್ವೇಷಗಳಿಲ್ಲ ನನಗೆ. ನಂದಿಹೋಗುವ ದೀಪ ನಾನು ನಿನ್ನ ಎದುರಾಗಲು ಜೀವ ಮತ್ತೆ ಮತ್ತೆ ಹವಣಿಸುತ್ತದೆ.
ಬೆಂಕಿ ಬಿದ್ದ ಹೃದಯವಿದು ಬೂದಿಯಾಗುತ್ತದೆ ಒಮ್ಮೆ.
ಬದುಕಿದ್ದೂ ಸತ್ತವನ ಚಿತೆ ಸುಡುವ ಕಾಲಕ್ಕೆ…
ನೆನಪಿರಲಿ ನಿನ್ನ ಅಳುವನ್ನು ಎಂದೂ ಬಯಸದವ ನಾನು! ನನ್ನ ಆಪ್ತರಿಗೆ ಹೇಳಿದ್ದೇನೆ ನನ್ನ ಸಾವಿನ ಸುದ್ದಿ ನಿನಗೆ ತಲುಪಿಸದಿರಿ ಎಂದು!
ನನ್ನ ಚಿತೆಯ ಬೂದಿ ನಿನ್ನೂರ ದಾರಿಗೆ ತೂರಿಬಿಡಲಿ ಸಾಕು. ಕಣ್ಣಿಗೆ ಬಿದ್ದರೆ ಬೂದಿ ಶಪಿಸಬೇಡ ನನ್ನನ್ನು..
ಈ ಮಳೆಯಲ್ಲಿ ನಾನು ಕದ್ದು ಅತ್ತಂತೆಯೇ ಧೂಳು ಬಿದ್ದ ನೆಪಕೆ ಕಣ್ಣುಗಳ ಉಜ್ಜಿ ಅತ್ತುಬಿಡು ನೀನು.. ಅತ್ತುಬಿಡು ನೀನು.. ಅತ್ತು ಬಿಡು ನೀನೂ.
-ವರದಿಗಾರರು, ಪ್ರಜಾ ಟಿವಿ, ಚಿಕ್ಕೋಡಿ.