ಬೆಳಗಾವಿ: ಅವರೆಲ್ಲ ಹೊಟ್ಟೆ ಪಾಡಿಗಾಗಿ ದುಡಿದು ಇನ್ನೇನು ಗೂಡು ಸೇರಬೇಕು ಅನ್ನೊವಷ್ಟರಲ್ಲಿ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ತತ್ತು ಕೂಳಿಗಾಗಿ ದಿನ ಪೂರ್ತಿ ದುಡಿದು ಇನ್ನೇನು ಮನೆ ಸೇರಬೇಕು ಅನ್ನೊವಾಗಲೆ ಬಡ ಕೂಲಿ ಕಾರ್ಮಿಕರು ಮಸಣ ಸೇರಿದ್ದು, ಮನೆಯವರನ್ನ ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ ಘಟನೆ ಸವದತ್ತಿ ಜನರನ್ನು ಬೆಚ್ಚಿ ಬೀಳಿಸಿದೆ. ಹೌದು.. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ ಸಂಬವಿಸಿದೆ. ಸವದತ್ತಿ-ಧಾರವಾಡ ಮಾರ್ಗದಲ್ಲಿರುವ ಪುರಸಭೆ ಕಸವಿಲೇವಾರಿ ಸಂಕೀರ್ಣದ ಬಳಿ ಬೊಲೇರೊ ಮತ್ತು ಟಾಟಾ ಏಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 6 ಜನರು ಮೃತಪಟ್ಟಿದ್ದಾರೆ. ಸವದತ್ತಿ ತಾಲೂಕಿನ ಚುಂಚನೂರ್ ಹಾಗೂ ಜಕಬಾಳ ಗ್ರಾಮಗಳ ಕೂಲಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಧಾರವಾಡ ಜಿಲ್ಲೆಯ ಮೊರಬ್ ಗ್ರಾಮದ ಜಮೀನಿನಲ್ಲಿ ದುಡಿಯಲು ಹೋಗಿ ಮರಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಇನ್ನು ಸುಮಾರು 25 ರಿಂದ 30 ಜನರಿದ್ದ ವಾಹನ ಅಪಘಾತದಲ್ಲಿ ಬುಲೆರೋ ವಾಹನ ಚಾಲಕ ಕೂಡ ಸಾವನ್ನಪ್ಪಿದ್ದಾನೆ. ಒಟ್ಟು 6 ಜನರು ಅಪಘಾತದಲ್ಲಿ ದುರ್ಮರಣಕ್ಕಿಡಾಗಿದ್ದಾರೆ. ಇದರಲ್ಲಿ ಚುಂಚನೂರ್ ಗ್ರಾಮದ ಯಲ್ಲವ್ವ ಮೂರಕಿಭಾವಿ (65) ಪಾರವ್ವ ಹುರಳಿ (35), ರುಕ್ಮವ್ವ ವಡಕಣ್ಣವರ್ (35) ಸೇರಿದಂತೆ ಒಟ್ಟು 5 ಜನ ಟಾಟಾ ಎಸ್ ನಲ್ಲಿದ್ದವರು ಹಾಗೂ ಒಬ್ಬ ಬೊಲೆರೋ ಚಾಲಕ ಸಾವನ್ನಪ್ಪಿದ್ದಾರೆಂದು ಇಉತಿಳಿದು ಬಂದಿದೆ. ಇನ್ನು ಘಟನೆಯಲ್ಲಿ 15 ಕ್ಕೂ ಹೆಚ್ಚು ಕಾರ್ಮಿಕರು ತೀವ್ರ ಗಾಯಗೊಂಡಿದ್ದಾರೆ. ಗಾಯಗಳನ್ನ ಸವದತ್ತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರೂರಿಗೆ ಹೋಗಿ ಮರಳಿ ಮನೆಗೆ ಬರಬೇಕಾದವರು ಬಾರದ ಲೋಕಕ್ಕೆ ತೆರಳಿದ್ದಾರೆ. ಸಧ್ಯ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನುಳಿದ ಮೃತರ ಮಾಹಿತಿಗಾಗಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.