ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮತ್ತೆ ಲೆಟರ್ ವಾರ್ ಶುರು ಮಾಡಿಕೊಂಡಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಡಿಕೆಗೆ ಸಾಲು ಸಾಲು ಲೆಟರ್ ಬರೆದಿದ್ದ ಸಿದ್ದು ಇದೀಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಶ್ರೀರಾಮುಲುಗೆ ಪತ್ರ ಬರೆದಿದ್ದಾರೆ. ಆರೋಗ್ಯ ಹಾಗೂ ಹಿಂದುಳಿದ ವರ್ಗಗಳ ಸಚಿವ ಆಗಿರುವ ಶ್ರೀರಾಮುಲುಗೆ ಬಾದಾಮಿ ಕ್ಷೇತ್ರದ 16 ನೂತನ ವಸತಿ ಬಿಸಿಎಮ್ ನಿಲಯ ಹಾಗೂ 14 ವಸತಿ ನಿಲಯಗಳ ಮೇಲ್ದರ್ಜೆಗೆ ಪತ್ರ ಬರೆದಿದ್ದಾರೆ. ಈ ಹಿಂದೆ (ಡಿ.5) ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಆಸ್ಪತ್ರೆ ವೈದ್ಯರ ಕೊರತೆ ಬಗ್ಗೆ ಸಾರ್ವಜನಿಕರು ಹೇಳಿದಾಗ, ಸಚಿವ ಶ್ರೀರಾಮುಲು ನನ್ನ ಮಾತೇ ಕೇಳೋದಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಅಲ್ದೇ ಇವಾ ಇದ್ದಾನಲ್ಲ (ಶ್ರೀರಾಮುಲು) ನನ್ನ ವಿರುದ್ಧ ಎಲೆಕ್ಷನ್ ಗೆ ನಿಂತಿದ್ದನಲ್ಲ. ಅವಾ ಯಾರಂವಾ ರಾಮುಲು ಅವನೇ ಹೇಲ್ತ್ ಮಿನಿಸ್ಟರ್. ಅವಾ ನಾ ಹೇಳಿದ್ರೆ ಕೇಳಲ್ಲಾ ಅವಾ. ಇನ್ನೊಂದ ಸಾರಿ ಹೇಳ್ತೀನಿ, ಮಾತೆ ಆಡಲ್ಲ ಅವಾ ನನ್ನ ಜೊತೆಯಲ್ಲಿ. ಅವನೇ ಹೆಲ್ತ್ ಮಿನಿಸ್ಟರ್ ನನ್ನ ಎದುರು ಸೋತನಲ್ಲಾ ಅವನೇ ಹೆಲ್ತ್ ಮಿನಿಸ್ಟರ್, ಹೆಲ್ತು ಮಿನಿಸ್ಟ್ರು ಎಂದು ಸಿದ್ದರಾಮಯ್ಯ ವ್ಯಂಗ್ಯ ವಾಡಿದ್ದರು. ಜೊತೆಗೆ ಡಾಕ್ಟರ್ ಗಳನ್ನು ಹಾಕಪ್ಪಾ ನಿನಗೂ ಭಾಳ ಓಟು ಕೊಟ್ಟವರೆ ಎಂದು ಉದ್ದಾಗಿ ರಾಮುಲುಗೆ ಪತ್ರ ಬರೆಯೋದಾಗಿ ಸಿದ್ದರಾಮಯ್ಯ ಹೇಳಿದ್ದರು. ಅದೇ ವೇದಿಕೆ ಮೇಲೆ ಹಾಸ್ಟೆಲ್ ಗಳ ಬಗ್ಗೆಯೂ ಸಿದ್ದರಾಮಯ್ಯ ಮಾತನಾಡಿದ್ದರು. ಇದೀಗ ವಿದ್ಯಾರ್ಥಿಗಳ ಅಂಕಿ ಸಂಖ್ಯೆ ಸಮೇತ ಆರೋಗ್ಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ರಾಮುಲುಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.