ವಿಜಯಪುರ: ಗುಮ್ಮಟನಗರಿ ವಿಜಯಪುರ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಾರೀ ಮಳೆಯಿಂದಾಗಿ ಜಿಲ್ಲೆಯ ಭೀಮಾ ನದಿ ಹಾಗೂ ಡೋಣಿ ನದಿಗಳು ಹಲವು ಅವಾಂತರಗಳನ್ನು ಸೃಷ್ಟಿಸಿವೆ. ಡೋಣಿ ನದಿ ತುಂಬಿ ಹರಿಯುತ್ತಿರುವ ಪರಿಣಾಮ ತಾಳಿಕೋಟೆ ಬಳಿ ಸೇತುವೆ ಮುಳುಗಡೆಯಾಗಿದ್ದು, ಜಲಾವೃತವಾದ ಸೇತುವೆ ಮೇಲೆ ಜನರು ಸಂಚರಿಸುತ್ತಿದ್ದಾರೆ. ಇಂದು ಸಹ ಅಪಾಯವನ್ನೂ ಲೆಕ್ಕಿಸದೇ ತುಂಬಿ ಹರಿಯುತ್ತಿರುವ ಸೇತುವೆ ದಾಟಲು ಬೈಕ್ ಸವಾರ ಮುಂದಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ.
ಆದರೆ ಅದೃಷ್ಟವಶಾತ್ ಸ್ಥಳಿಯರ ಸಮಯ ಪ್ರಜ್ಞೆಯಿಂದ ಬಚಾವ್ ಆಗಿದ್ದಾನೆ. ಸೇತುವೆ ಮುಳುಗಿದ ಪರಿಣಾಮ ತಾಳಿಕೋಟೆ ಪಟ್ಟಣದಿಂದ ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ, ಕಲ್ಲದೇನಹಳ್ಳಿ, ಹಗರಗೊಂಡ ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಇನ್ನು ರಾತ್ರಿ ಇಡೀ ಸುರಿದ ಮಳೆಗೆ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ 10 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. ಇದರಿಂದಾಗಿ ರಾತ್ರಿ ಇಡೀ ಗ್ರಾಮಸ್ಥರು ಪರದಾಡ ಬೇಕಾಯಿತು. ಇನ್ನು ಭಾಗಶಃ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.
ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಕಲಬುರ್ಗಿ ಜಿಲ್ಲೆ ಸೊನ್ನ ಬ್ಯಾರೇಜ್ ಹಿನ್ನಿರಿಗೆ ಒಳಪಡುವ ತಾರಾಪುರ ಗ್ರಾಮ ಪ್ರತಿಬಾರಿ ಮುಳಗಡೆ ಭೀತಿ ಎದುರಿಸುತ್ತಲೇ ಇದೆ. ಈ ಹಿಂದೆಯೇ ಸ್ಥಳಾಂತರವಾಗಬೇಕ್ಕಿದ್ದ ತಾರಾಪೂರ ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿ ವರ್ಷ ಭೀಮಾನದಿಗೆ ಪ್ರವಾಹ ಉಂಟಾದಲ್ಲಿ ತಾರಾಪೂರ ಗ್ರಾಮವನ್ನು ಭೀಮಾ ನದಿ ಹಿನ್ನೀರು ಸುತ್ತುವರೆಯುತ್ತದೆ. ಕಳೆದ 16 ವರ್ಷಗಳಿಂದ ಸ್ಥಳಾಂತರವಾಗದೇ ಗ್ರಾಮಸ್ಥರು ಪ್ರತಿ ವರ್ಷ ನರಕ ಯಾತನೆ ಅನುಭವಿಸುತ್ತಿದ್ದಾರೆ. ಸಧ್ಯ ತಾರಾಪೂರ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಇನ್ನು ಇಷ್ಟೆಲ್ಲಾ ಅವಾಂತರ ಸರತಷ್ಟಿಯಾಗಿದ್ದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.