ಬೆಳಗಾವಿ: ರೈಲ್ವೆ ಇಲಾಖೆಯ ರಾಜ್ಯ ಸಚಿವರು ಹಾಗೂ ಬೆಳಗಾವಿ ಸಂಸದ ಸುರೇಶ್ ಚನ್ನಬಸಪ್ಪ ಅಂಗಡಿ(65) ಅವರು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬುಧವಾರ (ಸೆ.23) ರಾತ್ರಿ ನಿಧನರಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ ಹತ್ತು ದಿನಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗಾವಿ ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಸುರೇಶ್ ಅಂಗಡಿ ಅವರು, ನಾಲ್ಕನೇ ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದರು. 2004, 2009, 2014 ಹಾಗೂ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗೆಲುವು ಸಾಧಿಸಿದ್ದರು.
ಸಚಿವ ರಮೇಶ್ ಜಾರಕಿಹೊಳಿ ಸಂತಾಪ:
ಆತ್ಮೀಯ ಸ್ನೇಹಿತರಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಹಠಾತ್ ನಿಧನ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಶೋಕ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ನಾವಿಬ್ಬರೂ ಪರಸ್ಪರ ಚರ್ಚೆ ಮಾಡಿ ಕೆಲಸ ಮಾಡುತ್ತಿದ್ದೆವು. ಕೋವಿಡ್ ಸೋಂಕು ವಿಪರೀತವಾಗಿ ಹರಡಿದ್ದ ಸಂದರ್ಭದಲ್ಲಿಯೂ ನಾನು ಮತ್ತು ಅಂಗಡಿ ಹಲವು ಬಾರಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದೆವು. ಅಗಲಿದ ಸ್ನೇಹಿತ ಸುರೇಶ್ ಅಂಗಡಿ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರಿಗೆ ಮತ್ತು ಅವರ ಅಪಾರ ಬೆಂಬಲಿಗರಿಗೆ, ಭಾಜಪ ಕಾರ್ಯಕರ್ತರಿಗೆ ಶೋಕ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.