ಕೊಪ್ಪಳ: ಅದು ಬರದನಾಡು. ಕಳೆದ 18 ವರ್ಷಗಳಲ್ಲಿ ಸುಮಾರು ದಶಕದವರೆಗೆ ಬರಗಾಲವನ್ನು ಕಂಡ ಜಿಲ್ಲೆ. ಅಲ್ಲಿ ಕೆರೆ-ಕಟ್ಟೆಗಳೆಲ್ಲ ನೀರಿಲ್ಲದೆ ಬತ್ತಿಹೋಗಿದ್ದವು. ಅಂತಹ ಒಂದು ಕೆರೆಗಳಲ್ಲಿ ತಲ್ಲೂರು ಕೆರೆ ಸಹ ಒಂದು. ಹೀಗಿರುವಾಗ ಚಲನಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಯಶೋಮಾರ್ಗದ ಮೂಲಕ ಕೆರೆಯಲ್ಲಿ ತುಂಬಿದ ಹೂಳು ತೆಗೆದು, ನೀರು ನಿಲ್ಲುವಂತೆ ಮಾಡಿದ್ದರು. ಈ ವರ್ಷ ಮಳೆ ಬಂದು ಎಲ್ಲಾ ಕೆರೆ ತುಂಬಿದ್ರು ತಲ್ಲೂರು ಕೆರೆ ಮಾತ್ರ ತುಂಬಿಲ್ಲ. ಕಾರಣ ಏನು ಅಂತೀರಾ? ಈ ಸ್ಟೋರಿ ಕಂಪ್ಲೀಟ್ ಓದಿ..
ಹೌದು.. ಸುಮಾರು 95 ಎಕರೆ ವಿಸ್ತಾರವಾದ ಈ ಪ್ರದೇಶ ಕೊಪ್ಪಳದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ. ಸತತ 20 ವರ್ಷಗಳ ಕಾಲ ಬತ್ತಿ ಹೋದ ಕೆರೆಯನ್ನು 2016-17 ರಲ್ಲಿ ಯಶೋಮಾರ್ಗದ ಮೂಲಕ ಜಲತಜ್ಞರ ಸಲಹೆ ಪಡೆದು ನಟ ರಾಕಿಂಗ್ ಸ್ಟಾರ್ ಯಶ್, ತಲ್ಲೂರು ಕೆರೆಯನ್ನು ಅಭಿವೃದ್ಧಿ ಪಡಿಸಲು ಮುಂದಾದರು. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಯ ಹೂಳನ್ನು ತೆಗೆದು ನೀರು ನಿಲ್ಲಿಸುವಂತೆ ಮಾಡಿದ ಶ್ರೇಯಸ್ಸು ಯಶ್ಗೆ ಸಲ್ಲುತ್ತದೆ. ನಂತರ 2018 ಹಾಗೂ 2019 ರಲ್ಲಿ ಕೆರೆಯಲ್ಲಿ ನೀರು ಕಂಡ ಜನತೆ ಈ ವರ್ಷ ನೀರು ಕಾಣಲಿಲ್ಲ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿ ಊರು, ಗ್ರಾಮಗಳ ಕೆರೆಗಳು ತುಂಬಿ ಹರಿಯುತ್ತಿದ್ದರೂ ಯಶ್ ಕನಸಿನ ಕೂಸು ತಲ್ಲೂರು ಕೆರೆ ಮಾತ್ರ ತುಂಬಲಿಲ್ಲ. ಅದಕ್ಕೆ ಕಾರಣ ಗದಗ- ವಾಡಿ ರೈಲ್ವೆ ಕಾಮಗಾರಿ. ಕೆರೆಯಿಂದ ಕೂಗಳತೆ ದೂರದಲ್ಲಿ ವಜ್ರಬಂಡಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ತಲ್ಲೂರು ಕೆರೆಗೆ ಹರಿದು ಬರುವ ನೀರಿನ ಹರಿವನ್ನು ಬದಲಿಸುವಂತೆ ಮಾಡಿದೆ. ಇದರಿಂದ ಈ ವರ್ಷ ಧಾರಾಕಾರವಾಗಿ ಮಳೆಯಾದ್ರೂ ಕೆರೆ ತುಂಬಲಿಲ್ಲ ಎನ್ನುವುದು ಸ್ಥಳಿಯರ ಅಸಮಾಧಾನ.
ತಲ್ಲೂರು ಕೆರೆಯಲ್ಲಿ ಕಳೆದ ಎರಡು ವರ್ಷಗಳಿಂದ ನೀರು ಹರಿದು ಬಂದ ಹಿನ್ನಲೆ ಸುತ್ತಮುತ್ತಲಿನ 15 ಗ್ರಾಮಗಳಲ್ಲಿ ಬೋರ್ವೆಲ್ಗಳು ರೀಚಾರ್ಜ್ ಆಗಿದ್ದವು. ಇದರಿಂದ ಅಲ್ಲಿಯ ಜನ ಫುಲ್ ಖುಷಿಯಾಗಿ ಯಶ್ ಅವರನ್ನು ಕೊಂಡಾಡಿದ್ದರು. ಆದ್ರೆ ಈ ವರ್ಷ ಇಡೀ ಜಿಲ್ಲೆಯಲ್ಲಿ ಹಳ್ಳ, ಕೊಳ್ಳ, ಕೆರೆಗಳು ವರುಣನ ಕೃಪೆಯಿಂದ ಭರ್ತಿಯಾಗಿ ಹರಿಯುತ್ತಿವೆ. ಆದ್ರೆ ತಲ್ಲೂರು ಕೆರೆ ಮಾತ್ರ ನೀರು ಹರಿಯುವ ಸ್ಥಳದಲ್ಲಿ ರೈಲ್ವೆ ಮಾರ್ಗ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಈ ಸಲ ನೀರು ಹರಿಯದೆ ಖಾಲಿ ಖಾಲಿಯಾಗಿದ್ದು ರೈತರ ಕಣ್ಣಲ್ಲಿ ನೀರು ತುಂಬಿವೆ. ಒಟ್ಟಾರೆ ನಟ ಯಶ್ ನಟಿಸಿದ ಕೆಜಿಎಫ್ ಸಿನಿಮಾದಷ್ಟೆ ತಲ್ಲೂರು ಕೆರೆ ಹೂಳೆತ್ತುವ ಕಾಮಗಾರಿ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಕೆರೆಯಲ್ಲಿ ನೀರು ಹರಿದಾಗ ಸ್ವತಃ ಯಶ್ ಹಾಗೂ ರಾಧಿಕಾ ಬಂದು ಬಾಗಿನ ಅರ್ಪಿಸಿ ಸಂಭ್ರಮಿಸಿದ್ದರು.