ಬೆಳಗಾವಿ: ಬೆಳಗಾವಿ ಸಮೀಪದ ನಾವಗೆ ಗ್ರಾಮದ ಯೋಧ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ನಾವಗೆ ಗ್ರಾಮದ ಯೋಧ ಶಿವಾಜಿ ಆನಂದ ತಳವಾರ (45) ಸೋಮವಾರ ತುಮಕೂರು ಬಳಿ ರಸ್ತೆ ಅಪಘಾತದಿಂದ ಸಾವಿಗೀಡಾಗಿದ್ದಾರೆ. ಶಿವಾಜಿ ತಳವಾರ್ ಸಂಚರಿಸುತ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಿಂದ ಕೊನೆಯುಸಿರೆಳೆದಿದ್ದಾರೆ. ರಜೆಯ ಮೇಲೆ ಬಂದಿದ್ದ ಶಿವಾಜಿ ಮೈಸೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಲು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಳೆದ 19 ವರ್ಷದಿಂದ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಾಜಿಗೆ ಇತ್ತಿಚಿಗಷ್ಟೆ ಸೇವೆಯಲ್ಲಿ ಬಡ್ತಿ ಸಿಕ್ಕಿತ್ತು. 12 ವರ್ಷದ ಹಿಂದೆ ವಿವಾಹವಾಗಿದ್ದ ಶಿವಾಜಿ ಮೃತ ದೆಹವನ್ನು ಇಂದು ನಾವಗೆ ಗ್ರಾಮಕ್ಕೆ ತಂದು ಈಗ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಇನ್ನು ಯೋಧನ ಸಾವಿನ ಸುದ್ದಿ ತಿಳಿದ ತಕ್ಷಣ ತಡಮಾಡದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ್ ಗ್ರಾಮಕ್ಕೆ ತೆರಳಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮೃತನ ಪತ್ನಿಯನ್ನು ತಬ್ಬಿಕೊಂಡು ಸಂತೈಸುವ ವೇಳೆ ಭಾವುಕರಾದ ಲಕ್ಷ್ಮೀ ಹೆಬ್ಬಾಳಕರ್ ದುಖಃ ತಡೆಯಲಾರದೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಅಂತಿಮ ಸಂಸ್ಕಾರಕ್ಕೆ ಭಾರತೀಯ ಸೇನೆ ಅಧಿಕಾರಿಗಳು ಕೂಡ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಇನ್ನು ಯೋಧ ಶಿವಾಜಿ ನಿಧನಕ್ಕೆ ಇಡೀ ಗ್ರಾಮವೇ ಕಂಬನಿ ಮಿಡಿಯುತ್ತಿದ್ದು, ನಾವಗೆ ಗ್ರಾಮದಲ್ಲಿ ಸೂತಕದ ಛಾಯೆ ಮನೆಮಾಡಿದೆ.