ವಿಜಯಪುರ: ವಿಜಯಪುರ ಪ್ರವಾಹ ಪೀಡಿತ ಪ್ರದೇಶದಲ್ಲೊಂದು ಮನ ಮಿಡಿಯುವ ಘಟನೆ ನಡೆದಿದೆ. ಮಾತೃ ಪ್ರೇಮಕ್ಕೆ ಶ್ವಾನವೊಂದು ಸಾಕ್ಷಿಯಾಗಿದೆ. ಭೀಕರ ಪ್ರವಾಹದಲ್ಲಿ ಮಾತೃ ಪ್ರೇಮ ಮೇರೆದ ಶ್ವಾನ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಮರಿಗಳನ್ನು ರಕ್ಷಿಸುವ ದೃಶ್ಯ ಎಂಥವರನ್ನು ಚಕಿತಗೊಳಿಸದೆ ಇರದು.
ತಾಯಿ ಶ್ವಾನ ತನ್ನ ಬಾಯಿಯಲ್ಲಿ ಮರಿಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಒಯ್ಯುತ್ತಿರುವ ದೃಶ್ಯ ಒಂದು ಕ್ಷಣ ಮೈಮರೆಯುವಂತೆ ಮಾಡುತ್ತದೆ. ವಿಜಯಪುರ ಜಿಲ್ಲೆಯ ತಾರಾಪುರದಲ್ಲಿ ಈ ದೃ಼ಶ್ಯ ಕಂಡುಬಂದಿದೆ. ಪ್ರವಾಹದಲ್ಲಿ ಸಿಲುಕಿದ್ದ ತನ್ನ ಎರಡು ಮರಿಗಳನ್ನು ರಕ್ಷಿಸಿದ ತಾಯಿ ಶ್ವಾನ, ಮತ್ತೆರಡು ಮರಿಗಳು ಭೀಮಾ ನದಿ ಪ್ರವಾಹದ ಪಾಲಾಗುವುದನ್ನು ನೋಡಿ ಮರ ಮರ ಮರುಗಿದೆ. ಭೀಮೆಯ ಪ್ರವಾಹಕ್ಕೆ ಜನತೆಯ ಜೊತೆ ಪ್ರಾಣಿಗಳೂ ಜೀವರಕ್ಷಣೆಗೆ ಪರದಾಟ ನಡೆಸಿದ್ದು, ಇನ್ನಾದರೂ ವರುಣದೇವ ಕೃಪೆ ತೋರಬೇಕಿದೆ.