ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ 71 ನೇ ಗಣರಾಜೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಗಣರಾಜೋತ್ಸವ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸಲ್ಲಿಸಿದರು. ಕೆಎಸ್ಆರ್ಪಿ, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ ರಾಷ್ರ್ಟಧ್ವಜಕ್ಕೆ ಗೌರವ ಸಲ್ಲಿಸಿದರು. ಮೈದಾನದಲ್ಲಿ ದೇಶಭಕ್ತಿ ಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರನ್ನು ರಂಜಿಸಿದವು. ಇದೆ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಲು ಸಚಿವ ಶೆಟ್ಟರ್ ಮನವಿ ಮಾಡಿದ್ರು. ರಾಷ್ಟ್ರದ ಅಭಿವೃದ್ಧಿಗೆ ಪೌರತ್ವ ತಿದ್ದುಪಡಿ ಕಾಯ್ದೆಯು ಪೂರಕವಾಗಿದೆ. ಈ ಕಾಯ್ದೆಯು ಯಾರ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಇದು ಪೌರತ್ವ ನೀಡುವ ಕಾಯ್ದೆಯಾಗಿದೆ. ಎಲ್ಲ ಭಾರತೀಯರು ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಮನವಿ ಮಾಡಿಕೊಂಡರು. ಅಲ್ಲದೇ ಇತ್ತೀಚೆಗೆ ವಿನಾಕಾರಣ ಗಡಿ ವಿಷಯ ಕೆಣಕುವ ಪ್ರಯತ್ನ ನಡೆದಿದೆ. ಇಲ್ಲಿನ ಜನರು ಯಾವುದೇ ಪ್ರಚೋದನೆಗೆ ಒಳಗಾಗದೇ ಎಲ್ಲರೂ ಸೌಹಾರ್ದದಿಂದ ಇರಬೇಕು ಎಂದು ಸಚಿವ ಶೆಟ್ಟರ್ ಹೇಳಿದರು. ಬೆಳಗಾವಿ ನಮ್ಮದು. ಗಡಿ ವಿವಾದ ಮುಗಿದ ಅಧ್ಯಾಯ. ಬೆಳಗಾವಿ ಕರ್ನಾಟಕಕ್ಕೆ ಸೇರಿದೆ ಎಂದು ಈಗಾಗಲೇ ಸಾರಿ ಸಾರಿ ಹೇಳಿದ್ದೇವೆ ಎಂದರು. ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್. ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಬಿ.ಲೊಕೇಶ್ ಕುಮಾರ್, ಉತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ, ಕಾ&ಸು ಡಿಸಿಪಿ ಸೀಮಾ ಲಾಟ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸ್ಥಳಿಯ ಶಾಸಕರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸಿದ್ದರು.