ಮೈಸೂರು: ಅನಧಿಕೃತ ಖಾಸಗಿ ಯೂನಿವರ್ಸಿಟಿ ಹೆಸರಿನಲ್ಲಿ ಹಣ ಪಡೆದು ಗೌರವ ಡಾಕ್ಟರೇಟ್ ಪದವಿ ಪ್ರಧಾನ ದಂಧೆ ಬೆಳಕಿಗೆ ಬಂದಿದೆ. ಮೈಸೂರಿನ ಖಾಸಗಿ ಹೊಟೇಲ್ನಲ್ಲಿ ನಡೆಯುತ್ತಿದ್ದ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭದ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಆಯೋಜಕರನ್ನ ಬಂಧಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಶಾಸಕರೊಬ್ಬರು ನಕಲಿ ಡಾಕ್ಟರೇಟ್ ಪದವಿ ಸ್ವೀಕರಿಸಲು ಬಂದು, ವಾಪಾಸ್ಸಾಗಿರುವ ಪ್ರಸಂಗವೂ ನಡೆದಿದೆ. ಮಹಾಮಾರಿ ಕೊರೋನ ವೈರಸ್ ಭೀತಿ ಆರ್ಥಿಕ ಪರಿಸ್ಥಿತಿಯನ್ನ ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಕೆಲ ಸಂಘಟನೆಗಳ ಮುಖಂಡರು, ಹೋರಾಟಗಾರರು, ರಾಜಕಾರಣಿಗಳು ನಕಲಿ ಗೌರವ ಡಾಕ್ಟರೇಟ್ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ.
ತಮಿಳುನಾಡು ಮೂಲದ ಇಂಟರ್ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಎಂಬ ಅನಧಿಕೃತ ಸಂಸ್ಥೆಯೊಂದು ಕಳೆದ ಎಂಟು ವರ್ಷದಿಂದ ಕೆಲ ರಾಜ್ಯಗಳಲ್ಲಿ ಶಾಂತಿ ಪುರಸ್ಕಾರ ಆಯೋಜಿಸುವ ಮೂಲಕ ಉಳ್ಳವರಿಂದ ಹಣ ಪಡೆದು ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡುತ್ತಾ ಬಂದಿದೆ. ಪ್ರಶಸ್ತಿ ಸ್ವೀಕರಿಸಿದ ಕೆಲವರು ಈ ಯೂನಿವರ್ಸಿಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಿಗಾವಹಿಸಿತ್ತು. ಇಂದು ಮೈಸೂರಿನ ಖಾಸಗಿ ಹೊಟೇಲ್ವೊಂದರಲ್ಲಿ 150 ಮಂದಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮೈಸೂರು ನಗರ ಡಿಸಿಪಿ ಡಾ.ಪ್ರಕಾಶ್ಗೌಡ ನೇತೃತ್ವದ ತಂಡ ತಮಿಳುನಾಡು ಮೂಲದ ನಂಬಿಯಾರ್ ಮತ್ತು ಶ್ರೀನಿವಾಸ್ ಎಂಬ ಇಬ್ಬರು ಆಯೋಜಕರನ್ನ ಬಂಧಿಸಿ, ಪ್ರಶಸ್ತಿ ಪತ್ರ, ಮೊಮೆಂಟೋಸ್ಗಳನ್ನ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಹರಿಹರ ಕಾಂಗ್ರೆಸ್ ಶಾಸಕ ರಾಮಪ್ಪ ಕೂಡ ಡಾಕ್ಟರೇಟ್ ಪದವಿ ಸ್ಚೀಕರಿಸಲು ಬಂದಿರುವುದನ್ನ ಕಂಡು ಪೊಲೀಸರಿಗೆ ಅಚ್ಚರಿಯಾಗಿದೆ.
ಈ ವೇಳೆ ಶಾಸಕ ರಾಮಪ್ಪ ಸೇರಿದಂತೆ ಡಾಕ್ಟರೇಟ್ ಪದವಿ ಸ್ವೀಕರಿಸಲು ಬಂದಿದ್ದ ಗಣ್ಯರಿಗೆ ಇದು ನಕಲಿ ಯೂನಿವರ್ಸಿಟಿ. ಇಲ್ಲಿ ಕೊಡಮಾಡುವ ಡಾಕ್ಟರೇಟ್ ಅಧಿಕೃತವಲ್ಲ ಎಂದು ಪೊಲೀಸರು ಬುದ್ದಿ ಹೇಳಿ ವಾಪಾಸ್ ಕಳುಹಿಸಿದ್ದಾರೆ. ಇನ್ನು 15 ಸಾವಿರದಿಂದ ಒಂದು ಲಕ್ಷದವರೆಗೂ ಹಣ ಪಡೆದು, ಕೆಲವರಿಂದ ದತ್ತು ನಿಧಿ ಹೆಸರಲ್ಲಿ ಹಣವನ್ನ ಡೆಪಾಸಿಟ್ ಮಾಡಿಸಿಕೊಂಡು ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದೆ. ಪ್ರಶಸ್ತಿ ಸ್ವೀಕರಿಸಿರುವವರಲ್ಲಿ ಮಂಡ್ಯ ಜಿಲ್ಲೆಯ ಕೆಲ ರಾಜಕಾರಣಿಗಳು, ಹೋರಾಟಗಾರರೇ ಹೆಚ್ಚು. ಈ ಸಂಬಂಧ ಮದ್ದೂರಿನ ಸಿ.ಎಸ್.ಸುರೇಶ್ ಎಂಬುವರು ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ. ಇದೀಗ ಮೈಸೂರಿನ ವಿಜಯನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ. ಪೊಲೀಸರ ತನಿಖೆಯಿಂದ ನಕಲಿ ಡಾಕ್ಟರೇಟ್ ದಂಧೆಯ ದೊಡ್ಡ ಜಾಲವೇ ಬಯಲಾಗುವ ಸಾಧ್ಯತೆ ಇದೆ.