ಹಾಸನ: ಮಳೆಹಾಡು ಕೇಳಿದಾಗಲೆಲ್ಲಾ ಮಲೆನಾಡು ಥಟ್ಟನೆ ನೆನಪಾಗದೇ ಇರದು. ಸದಾ ಹಸಿರು ಹೊದ್ದು ಮಲಗಿರುವ ಹಾಸನ ಜಿಲ್ಲೆಯ ಮಲೆನಾಡು, ಮಳೆಗಾಲದಲ್ಲಿ ಕಂಗೊಳಿಸುವುದೇ ಬೇರೆ. ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆ, ಮತ್ತೊಂದೆಡೆ ಇಡೀ ಗಿರಿಕಾನನವನ್ನೇ ಬಿಳಿಪರದೆಯಲ್ಲಿ
ಅವಿತು ಇಟ್ಟುಕೊಳ್ಳುವಂತೆ ಭಾಸವಾಗುವ ದಟ್ಟ ಮಂಜು, ಹಸಿರನ್ನು ಭಾಗ ಮಾಡಿದಂತೆ ಮೈದುಂಬು ಹರಿಯುವ ಕಿರುತೊರೆಗಳು. ಅಬ್ಬ! ಮಳೆಗಾಲದಲ್ಲಿ ಮಲೆನಾಡಿನ ಸೌಂದರ್ಯವನ್ನು ನೋಡುವುದೇ ಒಂದು ಚಂದ. ಆದರೀಗ ಮಳೆ ಪ್ರಮಾಣ ಕೊಂಚ ತಗ್ಗಿರುವುದರಿಂದ ಬಿಸಿಲೆ ಬ್ಯೂಟಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮಳೆಗಾಲ ಶುರುವಾದರೆ ಸಾಕು, ನಿತ್ಯ ಎಡೆಬಿಡದೆ ಸುರಿವ ಮುಸಲಧಾರೆ, ಹುಲ್ಲು ಗರಿಗೆ ಮೂಗುತಿ ಇಟ್ಟಂತೆ ಕಂಗೊಳಿಸೋ ಮಂಜಿನ ಹನಿ. ಹಾಲಿನ ಹೊಳೆಯಂತೆ ಭೋರ್ಗರೆದು ಹರಿವ ಹಳ್ಳಕೊಳ್ಳ, ಮುಗಿಲ ಚುಂಬಿಸೋ ರೀತಿಯಲ್ಲಿ ಭಾಸವಾಗುವ ಗಿರಿ-ಶಿಖರದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳೋದೇ ಮಹದಾನಂದ.
ಅದರಲ್ಲೂ ಮಲೆನಾಡಿನ ಬ್ಯೂಟಿ ಸ್ಪಾಟ್ ಎಂತಲೇ ಕರಸಿಕೊಳ್ಳುವ ಬಿಸಿಲೆ ರಕ್ಷಿತಾರಣ್ಯ ಮಂಜು-ಮಳೆಯ ನಡುವೆ ಮುಳುಗೇಳುವ ಚಲುವಂತೂ ಅಮಿತ ಮನೋಲ್ಲಾಸ ನೀಡದೇ ಇರದು. ಕರ್ನಾಟಕದ ಸ್ವಿಡ್ಜರ್‌ಲ್ಯಾಂಡ್, ಕರುನಾಡಿನ ಊಟಿ ಎಂದೆಲ್ಲಾ ಕರೆಸಿಕೊಳ್ಳುವ ಬಿಸಿಲೆಗೆ ಬಂದರೆ, ಮಂಜಿನ ಲೋಕದಲ್ಲಿ ನಾವೂ ಮುಳುಗಿಬಿಟ್ಟವೇ ಅನ್ನಿಸದೇ ಇರೋದಿಲ್ಲ. ನಿಜಕ್ಕೂ ಈ ತಾಣ ಭೂ ಲೋಕದ ಸ್ವರ್ಗ. ಪುಷ್ಪಗಿರಿ ಸೇರಿದಂತೆ 7 ಪರ್ವತಗಳು ಇಲ್ಲಿವೆ. ನೇತ್ರಾವತಿ ಉಪ ನದಿಗಳಾದ ಕುಮಾರಧಾರ ನದಿ ಈ ಮೂಲಕ ಹರಿಯಲಿದೆ. ಆದರೆ ಇಡೀ ಮಳೆಗಾಲದಲ್ಲಿ ದಟ್ಟ ಮಂಜು ಆವರಿಸಿಕೊಂಡರೆ, ಈಗ ಮಳೆ ಕೊಂಚ ಬಿಡುವು ನೀಡಿರುವುದರಿಂದ ಬಿಸಿಲೆಯ ನಿಜವಾದ ಬ್ಯೂಟಿ ಮಂಜಿನ ಮಧ್ಯೆ ಮರೆಯಾದರೂ, ಹಾಲ ಕಡಲಿಗೆ ಮುಖವೊಡ್ಡಿದಂತೆ ಸಿಗೋ ಇನೊಂದು ರೀತಿಯ ಮಜವೇ ಬೇರೆ. ಬಿಸಿಲೆಗೆ ಯಾರೇ ಬರಲಿ. ಮಳೆ ಮಂಜಿನ ನಡುವೆ ಮಿಂದೇಳದೇ, ಕುಣಿದು ಕಪ್ಪಳಿಸದೇ ಹೋಗೋದಿಲ್ಲ. ಮಳೆ ಇದ್ದಾಗ ಒಂದು ರೀತಿ ಕಾಣುವ ಬಿಸಿಲೆ ಬ್ಯೂಟಿ ಈಗ ಮತ್ತೊಂದು ರೀತಿ ಭಾಸವಾಗುತ್ತಿದೆ. ಪ್ರತಿ ಮಳೆಗಾಲದಲ್ಲೂ ಮಲೆನಾಡಿನಲ್ಲಿ ಕಂಡು ಬರುವ ಪ್ರಕೃತಿಯ ಸೊಬಗಿನ ರುದ್ರರಮಣೀಯ ದೃಶ್ಯ ನಿಜಕ್ಕೂ ವೈಭವಪೇತ. ಮಳೆ-ಮಂಜಿನ ಆಟ ಮನಸ್ಸಿಗೆ ಕಚಗುಳಿ ಇಡದೇ ಇರದು.
ನಿತ್ಯ ಜಂಜಾಟದಿಂದ ಬಸವಳಿದ ಯಾರೇ ಆಗಲಿ ಒಮ್ಮೆ ಸಕಲೇಶಪುರಕ್ಕೆ ಭೇಟಿ ಕೊಟ್ರೆ ಸಾಕು, ಹಸಿರು ಚೆಲುವಿನ, ಮಳೆಯ ನರ್ತನ, ಹಿಮರಾಶಿಯ ಚುಮು ಚುಮು ಚಳಿಯ ತನನನ… ತಣ್ಣನೆಯ ಲೋಕದ ನಿಜಾನುಭವ ಏನು ಅನ್ನೋದನ್ನು ಮನವರಿಕೆ ಮಾಡದೇ ಇರದು. ಮೊದಲೇ ಹಸಿರ ಸೆರಗ ಮರೆಯಲ್ಲಿ ಮಲಗಿರುವ ಮಲೆನಾಡಿನ ಮೈಸಿರಿ, ಮಳೆಯ ಸ್ಪರ್ಶ ವಾಗುತ್ತಿದ್ದಂತೆಯೇ ಬೇರೆಯದೇ ಹೊಸ ರೀತಿಯಲ್ಲಿ ಕಾಂತಿಯುತವಾಗಿ ಕಂಗೊಳಿಸುತ್ತದೆ. ಹಿಮದ ಹನಿಯ ಹೊತ್ತ ಹಸಿರು ಹುಲ್ಲುಗರಿಗೆ ಹೊಸ ರೂಪ ಬಂದು ಬಿಡುತ್ತದೆ. ನಿಜಕ್ಕೂ ಪ್ರಕೃತಿಯ ಮೂಲ ಸೌಂದರ್ಯದ ಸಹಜತೆ ನೋಡುಗರನ್ನು ಹೊಸ ಲೋಕಕ್ಕೆ ಕರೆದು ಕೊಂಡು ಹೋಗದೇ ಇರದು. ವೀಕೆಂಡ್ ಕಳೆಯೋಕಂತೂ ಹೇಳಿ ಮಾಡಿಸಿದ ಜಾಗ ಅಂತಾರೆ ಬಂದವರು. ಕಾಂಕ್ರಿಟ್ ಕಾಡಿನ ಮಧ್ಯೆ ದಿನದೂಡುವವರಿಗಂತೂ ಸಕಲೇಶಪುರ ಅಮರ ಸೌಂದರ್ಯ ಅಕ್ಷರಶಃ ಸ್ವರ್ಗದಂತೆ ಫೀಲ್ ಕೊಡದೇ ಇರದು. ಅಷ್ಟೇ ಅಲ್ಲ ಮತ್ತೆ ಮತ್ತೇ ಬರಬೇಕು ಎನಿಸುತ್ತದೆ. ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಂತೆ ಇರುವ ಸಕಲೇಶಪುರ ನಿಜಕ್ಕೂ ಸುಂದರ ತಾಣ ಅನ್ನೋದು ಒಳ ಹೊಕ್ಕಾಗ ಅರಿವಾಗದೇ ಇರದು. ಒಂದೆಡೆ ಪ್ರಕೃತಿಯ ಚೆಲುವು ಇನ್ನೊಂದು ಮರ್ಮರಿಸುತ್ತಾ ಹರಿಯುವ ಕಿರುತೊರೆಯ ಸದ್ದು, ಕಣ್ಣಾ ಮುಚ್ಚಾಲೆಯಾಡುವ ಮೋಡಗಳ ಆಟ, ಹೊಸ ಹೊಸ ಅನುಭವ ನೀಡುತ್ತದೆ.
ವರದಿ: ಶ್ರೇಯಾ ಕುಂದಗೋಳ. ನ್ಯೂಸ್90 ಕರ್ನಾಟಕ