ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತಾದ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ನಂಜುಂಡಿ ಸೇರಿದಂತೆ ವಿವಿಧ ಸಮುದಾಯದ ಮಠಾಧೀಶರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಸರ್ಕಾರದಲ್ಲಿ ಜಾತಿ ಜನಗಣತಿ ವರದಿ ಜಾರಿಗೆ ಬರಬೇಕಿತ್ತು. ಆದ್ರೆ ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ಬರಲಿಲ್ಲ. ಅದರ ಬಗ್ಗೆ ನಾನೇನೂ ಮಾತಾಡಲ್ಲ ಎಂದ ಅವರು ಸಮ್ಮಿಶ್ರ ಸರ್ಕಾರದಲ್ಲೂ ಜಾತಿ ಜನಗಣತಿ ವರದಿ ಜಾರಿಗೆ ಬರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗ ಶೆಟ್ಟಿ ಅವರು ವರದಿ ಜಾರಿಗೆ ಅವಕಾಶ ಕೊಡಲಿಲ್ಲ ಎಂದ್ರು. ಈಗ ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಜಾತಿ ಜನಗಣತಿ ವರದಿ ಸ್ವೀಕರಿಸದಿದ್ರೆ ಬೀದಿಗಿಳಿದು ಹೋರಾಟ ಮಾಡ್ತೇನೆ ಅಂತಾ ಈಗ ಸಿದ್ದರಾಮಯ್ಯ ಅವರು ಹೇಳ್ತಿದ್ದಾರೆ.
ಆದ್ರೆ ನಮ್ಮ ಸರ್ಕಾರ ಈ ವಿಚಾರದಲ್ಲಿ ಹೋರಾಟಕ್ಕೆ ಅವಕಾಶ ಕೊಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ ಈಶ್ವರಪ್ಪ, ವರದಿ ಜಾರಿಗೆ ನಾವೆಲ್ಲ ಒತ್ತಾಯ ಹಾಕೋಣ. ಸಚಿವ ರಾಮುಲು ಅವರು ಪರಿಷತ್ ನಲ್ಲಿ ವರದಿ ಒಪ್ಪಿಕೊಳ್ಳುವ ಭರವಸೆ ಕೊಟ್ಟಿದ್ದಾರೆ. ವರದಿ ಜಾರಿಗೆ ನಮ್ಮ ಸರ್ಕಾರ ಎಲ್ಲ ಪ್ರಯತ್ನ ಮಾಡಲಿದೆ. ಜಾತಿ ಜನಗಣತಿ ವರದಿ ಜಾರಿಗೆ ಕೆಲವರು ಅಡ್ಡ ಬರಬಹುದು. ಆದ್ರೆ ನಮ್ಮ ಸರ್ಕಾರ ವರದಿ ಜಾರಿಗೆ ಬದ್ಧವಾಗಿದೆ. ಯಾವುದೇ ಅಡ್ಡಿಗಳನ್ನು ನಮ್ಮ ಸರ್ಕಾರ ಪರಿಗಣಿಸಲ್ಲ. ನಾವೆಲ್ಲರೂ ಪಕ್ಷ ಬೇಧ ಮರೆತು ವರದಿ ಜಾರಿಗೆ ಶ್ರಮಿಸೋಣ ಎಂದು ಹೇಳಿದ್ರು.