ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಭಾಷಾ ರಾಜಕಾರಣ ನಡೆಯುವುದಿಲ್ಲ. ಇಲ್ಲೇನಿದ್ದರೂ ಅಭಿವೃದ್ಧಿಯ ಅಜೆಂಡಾ. ಕ್ಷೇತ್ರದ ಜನರು ಅತ್ಯಂತ ಚಾಣಾಕ್ಷರಿದ್ದು, ಕೆಲಸ ಮಾಡುವವರನ್ನು ಪ್ರೋತ್ಸಾಹಿಸುತ್ತಾರೆ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು. ಬೆಳಗಾವಿ ಕೃಷಿ ಉತ್ಪನ್ನ ಸಮಿತಿ ವ್ಯಾಪಾರಸ್ಥರು ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ನ ಹಿರಿಯ ಸದಸ್ಯರಾಗಿರುವ ಯುವರಾಜ ಕದಂ ಅವರು ಎಪಿಎಂಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರು ಇದಕ್ಕೆ ಸಹಕಾರ ನೀಡಿದ್ದಾರೆ. ಯುವರಾಜ ಕದಂ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಹೆಬ್ಬಾಳಕರ್ ಹೇಳಿದರು.
ನಾನು ಯಾವುದೇ ಕೆಲಸವನ್ನು ಹಿಡಿದರೆ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ಅಭಿವೃದ್ಧಿಯ ಕೆಲಸ ನೋಡಿಕೊಂಡು ನನ್ನನ್ನು ಬೆಂಬಲಿಸಿ. ನನ್ನ ಶಾಸಕ ನಿಧಿಯ 10 ಲಕ್ಷ ರೂಪಾಯಿ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುವುದು. ಈಗಿನ ಎಪಿಎಂಸಿ ಸಚಿವರು ಮೊದಲು ಕಾಂಗ್ರೆಸ್ ನಲ್ಲಿದ್ದವರೆ. ನನಗೂ ಆತ್ಮೀಯರು. ಎಪಿಎಂಸಿಗೆ ಆಗಬೇಕಾದ ಕೆಲಸಗಳನ್ನು ಅವರನ್ನೇ ಕರೆತಂದು ಮಾಡಿಸೋಣ. ಎಲ್ಲ ರೀತಿಯಿಂದಲೂ ಎಪಿಎಂಸಿ ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದರು. ನಾವೆಲ್ಲ ಸೇರಿ ರಾಜಕಾರಣವನ್ನು ಬದಿಗಿಟ್ಟು ಎಪಿಎಂಸಿ ಮೂಲಕ ರೈತರ ಅಭಿವೃದ್ಧಿಗೆ ಏನು ಬೇಕೋ ಅದನ್ನು ಮಾಡೋಣ. ರಾಜಕಾರಣವನ್ನು ಚುನಾವಣೆ ಬಂದಾಗ ನೋಡಿಕೊಳ್ಳೋಣ. ಈಗ ನಮ್ಮ ಗುರಿ ಏನಿದ್ದರೂ ಅಭಿವೃದ್ಧಿ ಎಂದು ಹೆಬ್ಬಾಳಕರ್ ಘೋಷಿಸಿದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ, ಸುರೇಶ್ ಚೌಗುಲೆ, ಎನ್.ಎ.ಜಂಗ್ರೂಚೆ, ಚೇತನ್ ಖಾಂಡೇಕರ್, ಅನ್ನು ಕಟಾಂಬಳೆ ಮೊದಲಾದವರು ಉಪಸ್ಥಿತರಿದ್ದರು.