ಗೋಕಾಕ್ ವಿಧಾನಸಭಾ ಕ್ಷೇತ್ರದ ಮಹಾಜನತೆಗೆ ನನ್ನ ವಿನಮ್ರ ಮನವಿ.
ನೆಚ್ಚಿನ ಸಾರ್ವಜನಿಕ ಬಂಧುಗಳೇ,
ನಿಮಗೆಲ್ಲಾ ತಿಳಿದಿರುವಂತೆ ನೋವೆಲ್ ಕೊರೋನಾ ಕೋವಿಡ್ 19 ಎಂಬ ವೈರಸ್ ಸೋಂಕು ಎಲ್ಲೆಡೆ ಹರಡುತ್ತಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ, ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದರೂ ಸಹಾ ಈ ಸೋಂಕು ಎಲ್ಲಾ ಕಡೆ ಹಬ್ಬುತ್ತಾ ಜನರ ಬದುಕನ್ನು ದುರ್ಭರಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಭಾರತದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು 21 ದಿನಗಳ ಕಾಲ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿ, ಭಾರತ ದೇಶದ ಪ್ರಜೆಗಳೆಲ್ಲರೂ ತಮ್ಮ ತಮ್ಮ ಮನೆಗಳ ಒಳಗೇ ಇದ್ದು ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದ್ದಾರೆ. ಅದರಂತೆ ಮಾರ್ಚ್ 25, 2020ರಿಂದ ಗೋಕಾಕ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಲಾಕ್ ಡೌನ್ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ತಮಗೆ ಅವಶ್ಯಕವಾಗಿರುವ ಜೀವನಾವಶ್ಯಕ ಸಾಮಗ್ರಿಗಳು ನಿಮ್ಮ ಮನೆಗಳ ಬಳಿಯೇ ದೊರೆಯುವ ವ್ಯವಸ್ಥೆ ಮಾಡಿದ್ದೇವೆ. ದಯವಿಟ್ಟು ಮನೆಯೊಳಗೇ ಇದ್ದು ಸಹಕರಿಸಿ ; ಪೊಲೀಸ್ ಅಧಿಕಾರಿಗಳಿಗೂ ಸಹಾ ಸಾರ್ವಜನಿಕರೊಂದಿಗೆ ಗೌರವದಿಂದ ನಡೆದುಕೊಳ್ಳುವಂತೆ ಸೂಚಿಸಿದ್ದೇನೆ. ನಾವೆಲ್ಲರೂ ಮನೆಗಳಲ್ಲಿ ಇರುವುದರಿಂದ ಸೋಂಕು ನಿಯಂತ್ರಣಕ್ಕೆ ಬರಲಿದೆ. ಈ ಸಂದರ್ಭದಲ್ಲಿ ನಾವು ಯಾರೂ ರಾಜಕೀಯ ಮಾಡುವುದು ಬೇಡ. ಇದು ಚುನಾವಣೆಯ ಸಂದರ್ಭ ಅಲ್ಲ ; ಸಮಾಜವನ್ನು ರಕ್ಷಿಸುವ ಸಮಯ.
ಈ ಸಂದರ್ಭದಲ್ಲಿ, ಸಾರ್ವಜನಿಕರು ವದಂತಿಗಳಿಗೆ ಕಿವಿಕೊಡದೇ ಮನೆಗಳಲ್ಲಿ ಸುರಕ್ಷಿತವಾಗಿರಲು ನಾನು ಮನವಿ ಮಾಡುತ್ತಿದ್ದೇನೆ. ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ. ಅನವಶ್ಯಕವಾಗಿ ರಸ್ತೆಗಳಲ್ಲಿ ಓಡಾಡಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಂಡು ನಿಮ್ಮ ನಿಮ್ಮ ಮನೆಗಳಲ್ಲಿರಿ. ಕೋವಿಡ್19 ಕೊರೋನಾ ಸೊಂಕು ಸಾಮಾಜಿಕವಾಗಿ ಹರಡುವುದನ್ನು ತಪ್ಪಿಸಿ. ಇದು ನಮ್ಮೆಲ್ಲರ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಸಮಯ. ಆದ್ದರಿಂದ ಎಚ್ಚರಿಕೆಯಿಂದ ಇರಿ. ಸರ್ಕಾರದ ಸೂಚನೆಗಳನ್ನು ಪಾಲಿಸಿ ಎಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ.
ನಮಸ್ಕಾರಗಳು
ಶ್ರೀ ರಮೇಶ್ ಎಲ್. ಜಾರಕಿಹೊಳಿ
ಜಲಸಂಪನ್ಮೂಲ ಸಚಿವರು
ಕರ್ನಾಟಕ ಸರ್ಕಾರ