ಬೆಳಗಾವಿ: ಗಡಿ ವಿಚಾರದಲ್ಲಿ ಎಂಇಎಸ್, ಶಿವಸೇನೆ ಸಕ್ಸಸ್ ಆಗಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಗಣರಾಜ್ಯೋತ್ಸವ ಧ್ವಜಾರೋಹಣದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಟ್ವಿಟ್ಟರ್ ಅಭಿಯಾನಕ್ಕೆ ಪ್ರತಿಕ್ರಿಯಿಸಿ, ಗಡಿವಿವಾದ ಮುಗಿದು ಹೋದ ಅಧ್ಯಾಯ. ಕನ್ನಡಿಗರು ಮರಾಠಿಗರು ಅಣ್ಣ ತಮ್ಮಂದಿರಂತೆ ಸೌಹಾರ್ದಯುತವಾಗಿ ಇದ್ದಾರೆ. ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಶಿವಸೇನೆ ಹೊರಟಿದೆ. ಕಾನೂನು ಹೋರಾಟ, ಈ ಭಾಗದ ರಕ್ಷಣೆಗೆ ನಾವು ಸದಾ ಬದ್ಧರಿದ್ದೇವೆ. ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ ಅಧಿವೇಶನ ನಡೆಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್ ನಲ್ಲಿ ಸೀನಿಯರ್ ಕೌನ್ಸಿಲ್ ನೇಮಿಸಿ ಕಾನೂನು ಹೋರಾಟಕ್ಕೂ ಸಿದ್ದರಿದ್ದೇವೆ. ಅವರು ಸುಪ್ರೀಂಕೋರ್ಟ್ ನಲ್ಲಿ ಸಕ್ಸಸ್ ಆಗ್ತಾರೋ ಇಲ್ವೋ ಎಂಬ ಸಂಶಯದಲ್ಲಿರಬಹುದು. ಅದಕ್ಕಾಗಿ ಈ ರೀತಿ ಪ್ರಚೋದನೆ ಮಾಡೋ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಶಿವಸೇನೆ ಇದರಲ್ಲಿ ಸಕ್ಸಸ್ ಆಗಲ್ಲ. ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಗೃಹ ಇಲಾಖೆ ಆಲೋಚನೆ ಮಾಡಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ನಾಡದ್ರೋಹಿಗಳ ವಿರುದ್ದ ಕಿಡಿಕಾರಿದ್ದಾರೆ.