ಕೋಲಾರ: ಕೆಜಿಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 2 ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇನ್ನು ಈ ಅಪಾರ ಪ್ರಮಾಣದ ಗಾಂಜಾ ಸಂಗ್ರಹಿಸಿಟ್ಟಿದ್ದ ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ. ಕುಖ್ಯಾತ ರೌಡಿ ತಂಗಂ ಸಹೋದರ ಪಲ್ ರಾಜ್ ಹಾಗೂ ಆತನ ಸಹಚರ ವಸಂತ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಕೆಜಿಎಫ್ ನಗರದ ಕೃಷ್ಣಗಿರಿ ಲೈನ್ ನಲ್ಲಿರುವ ತಮ್ಮ ನಿವಾಸದಲ್ಲಿ ಗಾಂಜಾ ಸಂಗ್ರಹಿಸಿ ಇಟ್ಟಿದ್ದರು. ಎರಡು ಬಾರಿ ದಾಳಿ ಮಾಡಿದ ಪೊಲೀಸರು ಒಟ್ಟು 410 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಲ್ ರಾಜ್ ಸೇರಿ 7 ಜನ ಆರೋಪಿಗಳು ನಾಪತ್ತೆಯಾಗಿದ್ರು. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿದ್ದ ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ಆರೋಪಿಗಳನ್ನ ಶೀಘ್ರ ಬಂಧಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದರು. ಆರೋಪಿಗಳ ಶೋಧಕ್ಕಿಳಿದ ಕೆಜಿಎಫ್ ಪೊಲೀಸರು ತಮಿಳುನಾಡಿನಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.