ಚಿಕ್ಕೋಡಿ: ಕೃಷ್ಣಾ, ವೇದಗಂಗಾ, ದೂಧಗಂಗಾ, ನದಿ ಪ್ರವಾಹಕ್ಕೆ ಸಿಲುಕಿ ನಾಲ್ಕು ತಿಂಗಳು ಗತಿಸಿದರೂ ಸಂತ್ರಸ್ತರ ಬದುಕು ಮಾತ್ರ ಸುಧಾರಿಸುತ್ತಿಲ್ಲ. ಒಂದು ಕಡೆ ಯಡಿಯೂರಪ್ಪ ಸರ್ಕಾರ ಭರವಸೆಗಳ ಮಹಾಪೂರ ಹರಿಸಿದರೂ ಕೂಡ ತಾಂತ್ರಿಕ ತೊಂದರೆ ಮತ್ತು ಉಪಚುನಾವಣೆ ನೆಪದಲ್ಲಿ ಸಂತ್ರಸ್ಥರ ಪರಿಹಾರಕ್ಕಾಗಿ ಹಗ್ಗ ಜಗ್ಗಾಟ ಮಾತ್ರ ಹಾಗೆಯೇ ಮುಂದುವರೆದಿದೆ.
ಪ್ರವಾಹ ಬಂದಾಗ ಮನೆ ಕಳೆದುಕೊಂಡು ಶೆಡ್ನಲ್ಲಿ ವಾಸಿಸುತ್ತಿರುವ ಸಂತ್ರಸ್ತರ ಸಂಕಷ್ಟಗಳು ಅವರ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗಗದಲ್ಲಿ 80 ಕ್ಕೂ ಹೆಚ್ಚು ಹಳ್ಳಿಗಳು ನೆರೆ ಹಾವಳಿಗೆ ಸಿಲುಕಿದ್ದು, ತಮ್ಮ ಜೀವನದ ಭರವಸೆ ಕಳೆದುಕೊಂಡ ಸಾವಿರಾರು ಜನರು ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಮಾತ್ರ ಪರಿಹಾರ ನೀಡಿದ್ದೇವೆ ಎನ್ನುವ ಮಾತುಗಳನ್ನು ಹೇಳುತ್ತಲೆ ಬರುತ್ತಿದೆ. ಸದ್ಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ೧೦ಕ್ಕೂ ಹೆಚ್ಚು ಕುಟುಂಬಗಳು ಸಮುದಾಯ ಭವನದಲ್ಲಿ ವಾಸಮಾಡುತ್ತಿದ್ದು ಬಾಡಿಗೆ ರೂಪದಲ್ಲಿ ಸರ್ಕಾರ ನೀಡಬೇಕಿದ್ದ ಐದು ಸಾವಿರ ಹಣ ಕೂಡ ಇನ್ನೂ ಬಿಡುಗಡೆಯಾಗದೆ, ಇತ್ತ ಉಪಜೀವನಕ್ಕೆ ಕೆಲಸವೂ ಇಲ್ಲದೆ ಸಂತ್ರಸ್ಥರು ಪರದಾಡುತ್ತಿದ್ದಾರೆ. ಬಿದ್ದ ಮನೆಗಳಿಗೆ ಶೆಡ್ ನಿರ್ಮಾಣ ಮಾಡಿಕೊಳ್ಳಿ ನಿಮಗೆ ಅದರ ಹಣ ನೀಡಲಾಗುತ್ತದೆ ಎಂದು ಹೇಳಿದರೂ ಕೂಡ ಇಲ್ಲಿ ಶೆಡ್ ನಿರ್ಮಾಣ ಮಾಡಿದರು ಸಹಿತ ಅವುಗಳಿಗೆ ಯಾವುದೇ ರೀತಿಯ ಪರಿಹಾರ ಹಣ ಬಂದಿಲ್ಲ. ಅಷ್ಟೇ ಅಲ್ಲದೆ ಇಷ್ಟು ದಿನ ಹಳೆಯ ಗುಡಿಸಲಲ್ಲಿ ಇದ್ದೇವು, ಈಗ ಮನೆ ಕಟ್ಟಡ ಪ್ರಾರಂಭ ಮಾಡಿದ್ದರಿಂದ ಸಮುದಾಯ ಭವನದಲ್ಲಿ ವಾಸಿಸುವಂತ ಪ್ರಸಂಗ ಎದುರಾಗಿದೆ. ಮೂಲ ಸೌಕರ್ಯಗಳ ಕೊರತೆ ಇದೆ ಎನ್ನುತ್ತಾರೆ ಇಲ್ಲಿನ ಸಂತ್ರಸ್ತರು. ರಾಜ್ಯ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದೆ. ಆದ್ರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿಯೂ ತಾರತಮ್ಯವಾಗಿರುವ ಮಾತುಗಳು ಈಗಲೂ ಕೇಳಿಬರುತ್ತಿವೆ. ನೆರೆ ಬಂದು ಮೂರ್ನಾಲ್ಕು ತಿಂಗಳು ಆದರೂ ಸಹಿತ ಇನ್ನು ಕೂಡಾ ಸಮೂದಾಯ ಭವನಗಳಲ್ಲಿ ಜೀವನ ಸಾಗಿಸುವ ಸ್ಥಿತಿ ಎದುರಾಗಿದ್ದು ಮಾತ್ರ ವಿಪರ್ಯಾಸವೇ ಸರಿ. ಪ್ರವಾಹ ಬಂದಾಗ ಆರಂಭ ಶೂರತ್ವ ತೋರಿಸಿದ ಅಧಿಕಾರಿಗಳು ಮತ್ತು ಸರ್ಕಾರ ಇನ್ನಾದರೂ ಸಂತ್ರಸ್ಥರ ಬದುಕು ಕಟ್ಟಲು ಮುಂದಾಗುತ್ತಾರಾ ಅಂತ ಕಾಯ್ದು ನೋಡಬೇಕಿದೆ.