ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಕಾವು ರಂಗೆರ್ತಿದೆ. ಅದರಲ್ಲೂ ಬೆಂಗಳೂರಿನ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಕುಸುಮಾ ಅವರು ನಿನ್ನೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಕುಸುಮಾ ನಾಮಪತ್ರದ ಜೊತೆಗೆ ಸಲ್ಲಿಸಿದ ಅಫಿಡಿವಿಟ್ ನಲ್ಲಿ ಬರೊಬ್ಬರಿ 2 ಕೋಟಿ 47 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಇನ್ನು ಕೈ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಸಲ್ಲಿಸಿರುವ ನಾಮಪತ್ರದ ಪತಿಯ ಹೆಸರಿನ ಕಾಲಂನಲ್ಲಿ ಅನ್ವಯವಾಗುವುದಿಲ್ಲ ಎಂದು ಬರೆದಿದ್ದಾರೆ.
ಕುಸುಮಾ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಎಲ್ಲಿಯೂ ತಮ್ಮ ಪತಿ, ದಿವಂಗತ ಡಿ.ಕೆ.ರವಿ ಅವರ ಹೆಸರನ್ನು ನಮೂದಿಸಿಲ್ಲ. ಪತಿಯ ಹೆಸರನ್ನು ಬಳಸದ ಕುಸುಮಾ, ತಂದೆಯ ಕಾಲಂ ಭರ್ತಿ ಮಾಡಿದ್ದು ಹನುಮಂತರಾಯಪ್ಪ ಪುತ್ರಿ ಎಂದು ಬರೆದಿದ್ದಾರೆ. ಇನ್ನು ಕುಸುಮಾ ಕುಸುಮಾ ಹುಟ್ಟಿದ ದಿನ ಮಂಗಳವಾರ ಆಗಿದ್ದರಿಂದ ಹಾಗೂ ಜ್ಯೋತಿಷಿ ಆರಾಧ್ಯ ಅವರ ಸಲಹೆಯಂತೆ ನಿನ್ನೆ ಮಧ್ಯಾಹ್ನ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಳಿದಂತೆ ಕುಸುಮಾ ತಮ್ಮ ಅಫೀಡಿವಿಟ್ ನಲ್ಲಿ ಘೋಷಿಸಿದ ಆಸ್ತಿಯ ವಿವರ ನೋಡೊದಾದ್ರೆ, 1.41 ಲಕ್ಷ ನಗದು, ಬೇರೆ ಬೇರೆ ಬ್ಯಾಂಕುಗಳಲ್ಲಿ 5.52 ಲಕ್ಷ ರೂಪಾಯಿ ಹಣ, ಷೇರುಗಳಲ್ಲಿ 2.25 ಲಕ್ಷ ರೂಪಾಯಿ ಹೂಡಿರುವ ಕುಸುಮಾ, ಎಚ್.ಅನಿಲ್ ಗೌಡ ಎಂಬುವರಿಗೆ 205 ಲಕ್ಷ ರೂಪಾಯಿ, ಎಬಿಎಚ್ ಇನ್ಫ್ರಾಸ್ಟ್ರಕ್ಚರ್ ಅವರಿಗೆ 56.58 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದಾರೆ. ಇನ್ನು ಗಿಫ್ಟ್ ಆಗಿ ಬಂದಿರುವ 45 ಲಕ್ಷ ರೂಪಾಯಿ ಮೌಲ್ಯದ 1.1 ಕಿಲೋ ಚಿನ್ನಾಭರಣ ಸಹಿತ ಒಟ್ಟು 1 ಕೋಟಿ 13 ಲಕ್ಷ ರೂಪಾಯಿಯ ಚರಾಸ್ತಿ ಹೊಂದಿದ್ದರೆ, 1.7 ಕೋಟಿ ರೂಪಾಯಿ ಮೌಲ್ಯದ ನಿವೇಶನವನ್ನು ತಮ್ಮ ತಾಯಿ ಗಿಫ್ಟ್ ನೀಡಿದ್ದಾರೆ. ಸಧ್ಯ 30 ಲಕ್ಷ ರೂಪಾಯಿ ಮೌಲ್ಯದ ನಿವೇಶನವನ್ನು ಖರಿದಿಸಿರುವುದಾಗಿ ಕುಸುಮಾ ಹೇಳಿದ್ದು, ಉಳಿದಂತೆ 20.48 ಲಕ್ಷ ರೂಪಾಯಿ ಸಾಲವನ್ನು ಭೈರಮ್ಮ ಎಂಬುವರಿಂದ ಪಡೆದಿದ್ದು, ಸ್ವಂತ ಮನೆ ಹಾಗೂ ಕಾರು ಸೇರಿದಂತೆ ಯಾವುದೇ ವಾಹನ ಹೊಂದಿರುವ ಬಗ್ಗೆ ಅಫೀಡಿವಿಟ್ ನಲ್ಲಿ ತಿಳಿಸಿಲ್ಲ.
ಬ್ಯೂರೊ ರಿಪೋರ್ಟ್, ನ್ಯೂಸ್90 ಕರ್ನಾಟಕ.