ಕೂಗು ನಿಮ್ಮದು ಧ್ವನಿ ನಮ್ಮದು

ಕನಸಿನ ಮನೆಯ ಗೃಹ ಪ್ರವೇಶಕ್ಕೆ ಮೃತ ಹೆಂಡತಿ ಕರೆತಂದ ಕೊಪ್ಪಳದ ಷಹಾಜಾನ್

ಕೊಪ್ಪಳ: ಹೊಸ ಮನೆಯ ಕನಸು ಕಂಡಿದ್ದ ಮನೆಯೊಡತಿ ತೀರಿಕೊಂಡು ಮೂರು ವರ್ಷಗಳೇ ಕಳೆದು ಹೋಗಿವೆ. ಆದ್ರೆ ಇದ್ದಕ್ಕಿದ್ದ ಹಾಗೇ ಆ ಹೊಸಮನೆಯ ಗೃಹ ಪ್ರವೇಶದ ದಿನ ಆ ಮನೆಯ ಯಜಮಾನತಿ ಪ್ರತ್ಯಕ್ಷವಾಗಿದ್ದಾಳೆ. ಗೃಹ ಪ್ರವೇಶದ ದಿನ ಸೋಫಾ ಮೇಲೆ ಅಲಂಕೃತಗೊಂಡು ಕುಳಿತಿದ್ದ ಯಜಮಾನತಿಯನ್ನ ಕಂಡು ನೆಂಟರಿಷ್ಟರು, ಸ್ನೇಹಿತರು, ಹಿತೈಷಿಗಳು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಇಂತಹದೊಂದು ಘಟನೆಗೆ ಸಾಕ್ಷಿಯಾಗಿರೋದು ಕೊಪ್ಪಳ ಪಟ್ಟಣದ ಭಾಗ್ಯನಗರ. ಅರೇ ಇದೇನಿದು ವಿಚಿತ್ರ ಘಟನೆ ಅಂತೀರಾ ಈ ಕುರಿತಾದ ಒಂದು ಕಂಪ್ಲೀಟ್ ರಿಪೋರ್ಟ ಇಲ್ಲಿದೆ.

ಹೌದು.. ಸೋಫಾ ಮೇಲೆ ಅಲಂಕೃತಗೊಂಡು ಹೀಗೆ ಕುಳಿತಿರುವ ಮಹಿಳೆಯ ಹೆಸರು ಮಾಧವಿ ಗುಪ್ತಾ, ಕೊಪ್ಪಳ ಪಟ್ಟಣದ ಭಾಗ್ಯನಗರ ನಿವಾಸಿ 2017 ರಲ್ಲಿ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಸ್ವಂತ ಮನೆಯ ಕನಸು ಕಂಡಿದ್ದ ಮಾಧವಿ ಗುಪ್ತಾ ಮನೆ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಅಪಘಾತವೊಂದರಲ್ಲಿ ತೀರಿಕೊಂಡಿದ್ದಾರೆ. ಮಾಧವಿಯವರ ಪತಿಯ ಹೆಸರು ಶ್ರೀನಿವಾಸ ಗುಪ್ತಾ. ಪತ್ನಿ ತೀರಿಕೊಂಡ ಬಳಿಕ ತನ್ನಿಬ್ಬರ ಮುದ್ದಾದ ಹೆಣ್ಣು ಮಕ್ಕಳೊಡಗೂಡಿ ಪತ್ನಿಯ ಕನಸಿನ ಮನೆಯನ್ನ ಪೂರ್ತಿಗೊಳಿಸಿರುವ ಶ್ರೀನಿವಾಸ ಗುಪ್ತಾ, ತಮ್ಮ ಮನೆಯ ಗೃಹ ಪ್ರವೇಶಕ್ಕೆ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ.

ಅಂದಹಾಗೇ ಚಿತ್ರದಲ್ಲಿ ಕಾಣುತ್ತಿರುವ ಮಾಧವಿಯವರದು ಸಿಲಿಕಾನ್ ರಿಯಲಿಸ್ಟಿಕ್ ಬೊಂಬೆಯ ಪ್ರತಿಮೆ. ಮಾಧವಿಯವರು ತೀರಿಕೊಂಡ ಬಳಿಕ ಶ್ರೀನಿವಾಸ ಗುಪ್ತಾ ಅವರು ತಮ್ಮ ಹೊಸ ಮನೆಯಲ್ಲಿ ಪತ್ನಿಯ ಸವಿ ನೆನಪಿಗಾಗಿ ಏನು ಮಾಡುವುದು ಎಂದು ಚಿಂತಿಸುತ್ತಿರುವಾಗಲೇ ಕೆಲವರು ಮೇಣದ ಪ್ರತಿಮೆಯ ಐಡಿಯಾ ಕೊಟ್ಟಿದ್ದು. ಹೀಗಾಗಿ ತಮ್ಮ ಪತ್ನಿಯ ಮೇಣದ ಪ್ರತಿಮೆಗಾಗಿ ಬೆಂಗಳೂರಿನಲ್ಲಿ ವಿಚಾರಿಸಿದ್ದಾರೆ. ಕೊಪ್ಪಳ ಭಾಗದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಮೇಣದ ಪ್ರತಿಮೆಗಿಂತ ಸಿಲಿಕಾನ ಪ್ರತಿಮೆ ಉತ್ತಮ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ತಮ್ಮ ಪತ್ನಿಯ ಪೋಟೊ ಕೊಟ್ಟು ಥೇಟ್ ಅದೇ ತರಹದ ಸಿಲಿಕಾನ್ ಬೊಂಬೆಗೆ ಆರ್ಡರ್ ಮಾಡಿದ್ದಾರೆ. ತಮ್ಮ ಪತ್ನಿಯನ್ನ ಹೋಲುವ ಬೊಂಬೆ ತಯಾರಾದ ಬಳಿಕ ಮನೆಯ ಗೃಹಪ್ರವೇಶ ಇಟ್ಟುಕೊಂಡ ಶ್ರೀನಿವಾಸ ಗುಪ್ತಾ ತಮ್ಮ ಪತ್ನಿಯನ್ನ ಸೋಫಾ ಮೇಲೆ ಪ್ರತಿಷ್ಠಾಪಿಸಿದ್ದಾರೆ.

ಮನೆಯ ಗೃಹಪ್ರವೇಶಕ್ಕೆ ಬಂದ ನೆಂಟರಿಷ್ಟರು ಹಾಗೂ ಸ್ನೇಹಿತರು ಈ ರಿಯಲಿಸ್ಟಿಕ್ ಪ್ರತಿಮೆ ಕಂಡು ಶಾಕ್ ಗೆ ಒಳಗಾಗಿದ್ದಾರೆ. ಈ ಪ್ರತಿಮೆ ಮೂವೇಬಲ್ ಆಗಿದ್ದು ಕಾರನಲ್ಲಿಯೂ ಸೀಟ್ ಮೇಲೆ ಕುಳ್ಳಿರಿಸಿ ತೆಗೆದುಕೊಂಡು ಹೋಗಬಹುದಾಗಿದೆ. ಶ್ರೀನಿವಾಸ ಗುಪ್ತಾರವರ ಪತ್ನಿ ಪ್ರೇಮಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಈ ಪ್ರತಿಮೆ ನೋಡಲು ಜನ ಗುಪ್ತಾರವರ ಮನೆಗೆ ಬರುತ್ತಿದ್ದಾರೆ.

ವರದಿ: ಪವನ್ ದೇಶಪಾಂಡೆ. ಕೊಪ್ಪಳ

error: Content is protected !!