ಬೆಳಗಾವಿ: ತ್ಯಾಜ್ಯ ವಿಲೇವಾರಿ, ಮಾಲಿನ್ಯದ ಸ್ಥಿತಿಗತಿ, ಹವಾಮಾನ ನಿಖರತೆ, ಸಂಚಾರ ನಿರ್ವಹಣೆ, ಕುಡಿಯುವ ನೀರಿನ ಲಭ್ಯತೆಯಿಂದ ಹಿಡಿದು ಇ-ಗವರ್ನೆನ್ಸ್ ವರೆಗಿನ ಪ್ರತಿಯೊಂದು ವ್ಯವಸ್ಥೆಯನ್ನು ಒಂದೇ ಕಡೆ ಕುಳಿತು ನಿರ್ವಹಿಸಲು ಸಾಧ್ಯವಾಗುವಂತಹ ಸ್ಮಾರ್ಟ್ ವ್ಯವಸ್ಥೆಯೇ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್. ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್(ಸಮಗ್ರ ಆಜ್ಞಾ ಮತ್ತು ನಿರ್ವಹಣಾ ಕೇಂದ್ರ)ವನ್ನು ಸ್ಥಾಪಿಸಲಾಗಿದೆ.
ಕಾಮಗಾರಿಯ ಸಂಕ್ಷಿಪ್ತ ವಿವರಗಳು :
ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್(ಸಮಗ್ರ ಆಜ್ಞಾ ಮತ್ತು ನಿರ್ವಹಣಾ ಕೇಂದ್ರ) ಈ ಕಾಮಗಾರಿಯ ಯೋಜನಾ ಮೊತ್ತ ರೂ.76.80 ಕೋಟಿಗಳಾಗಿದ್ದು, ಟೆಂಡರ್ ಅನ್ನು ರೂ.45.99
ಕೋಟಿಗಳಿಗೆ ಗುತ್ತಿಗೆದಾರರಾದ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಬೆಂಗಳೂರು, ರವರಿಗೆ
ದಿನಾಂಕ:16-03-2018 ರಂದು ಕಾರ್ಯಾದೇಶವನ್ನು ನೀಡಲಾಗಿರುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿವಿಧ ಇಲಾಖೆಗಳ ತಲಾ ಒಬ್ಬರು ಸಿಬ್ಬಂದಿಗಳನೊಳಗೊಂಡ ಏಕಗವಾಕ್ಷಿ (ಸಿಂಗಲ್ ವಿಂಡೋ) ಪದ್ದತಿಯ ಸೇವೆ ಈ ಸೆಂಟರ್ ನಿಂದ ನೀಡಬಯಸಿದ್ದು, ಇದರಿಂದ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ಸೇವೆ ಪಡೆಯಬಹುದಾಗಿದ್ದು, ತಮ್ಮ ದೂರುಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಘನ ತ್ಯಾಜ್ಯ ವಿಲೇವಾರಿ (ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್) :
ನಗರದಾದ್ಯಂತ 1,10,000 ಮನೆಗಳಿಗೆ
- ಆರ್.ಎಫ್.ಐ.ಡಿ ಟ್ಯಾಗ್ ಅಳವಡಿಸುವುದು ಮತ್ತು ಈ ಮೂಲಕ ಸಮಯಕ್ಕೆ ಸರಿಯಾಗಿ ಮನೆಗಳ ಕಸ ಸಂಗ್ರಹಣೆ / ವಿಲೇವಾರಿ ಮಾಹಿತಿಯನ್ನು ಪಡೆಯಬಹುದಾಗಿದೆ. ಕಸ ವಿಲೇವಾರಿ ವಾಹನಗಳಿಗೆ ಆನಲೈನ್ ಟ್ರ್ಯಾಕಿಂಗ್, ಮಾರ್ಗಸೂಚಿ (ರೂಟ್ ಆಪ್ಟಿಮೈಸರ್) ಅಳವಡಿಕೆ ಮತ್ತು ಕಸ ವಿಲೇವಾರಿ ಸ್ಥಳದಲ್ಲಿ ಕಸದ ತೂಕ & ಕ್ಷೇತ್ರದ ವಿವರ, ಮತ್ತು ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ತಡೆಯುವುದಕ್ಕಾಗಿ ಸುಮಾರು 20 ನಿಷೇಧಿತ ಸ್ಥಳಗಳನ್ನು ಗುರುತಿಸಿ ಆ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಈ ಮೂಲಕ ನಿಷೇಧಿತ ಸ್ಥಳಗಳಲ್ಲಿ ಕಸ ಬಿಸಾಡುವುದನ್ನು ತಿಳಿದುಕೊಂಡು ತಡೆಯಬಹುದಾಗಿದೆ.
ಸ್ಮಾರ್ಟ್ ಪೋಲ್ (ಕಂಬ) :
- ಈ ಕಂಬಗಳ ಮೂಲಕ ನಗರದ ಮಾಲಿನ್ಯದ ಸ್ಥಿತಿಗತಿ ಹಾಗೂ ಹವಾಮಾನದ ನಿಖರತೆಯ ಕುರಿತಾದ ಮಾಹಿತಿ ಪಡೆಯಬಹುದಾಗಿದೆ. ಹಾಗೂ ನಗರದ ಮಹಿಳೆಯರ ಸುರಕ್ಷತೆಯ ಹಿತದೃಷ್ಟಿಯಿಂದ ಮೂರು ಸಿಸಿಟಿವಿ ಕ್ಯಾಮೆರಾಗಳನ್ನು ಒಳಗೊಂಡ ಈ ಕಂಬಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಲಾಗಿದ್ದು, ತೊಂದರೆಯಲ್ಲಿರುವ ಸಾರ್ವಜನಿಕರು ಈ ಪ್ಯಾನಿಕ್ ಬಟನ್ ಒತ್ತುವ ಮೂಲಕ ರಕ್ಷಣೆ ಪಡೆಯಬಹುದಾಗಿದೆ. ಅಲ್ಲದೇ ಸಂಬಂಧಿಸಿದ ಇಲಾಖೆಯ ಸಿಬ್ಬಂದಿಗಳಿಂದ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದ್ದು, ಈ ಕುರಿತು ತೊಂದರೆಯಲ್ಲಿರುವವರಿಗೆ ಧ್ವನಿಯ ಮೂಲಕ ಸಾಂತ್ವನ ಆಲಿಸುವಂತಹ ಧ್ವನಿವರ್ಧಕದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಂಬದಲ್ಲಿ ಸಾರ್ವಜನಿಕರಿಗಾಗಿ ವೈ-ಫೈ ವ್ಯವಸ್ಥೆ ಅಳವಡಿಸಲಾಗಿದೆ.
ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜಮೆಂಟ್ (ಸುಗಮ ಸಂಚಾರ ನಿರ್ವಹಣೆ) :
ಇಂಟೆಲಿಜೆಂಟ್ ಟ್ರಾನ್ಸಪೋರ್ಟ್ ಸಿಸ್ಟಮ್ (ಜಾಣ ಸಾರಿಗೆ ವ್ಯವಸ್ಥೆ) :
- ನಗರದ ಬಸ್ ನಿಲ್ದಾಣಗಳಲ್ಲಿನ ಬಿಲ್ ಬೋರ್ಡ ಡಿಸ್ಪ್ಲೇ ಮೂಲಕ ಸಾರ್ವಜನಿಕರು ಬಸ್ಗಳ ಚಲನವಲನ ಹಾಗೂ ಮಾರ್ಗ ತಿಳಿದುಕೊಳ್ಳಬಹುದಾಗಿದೆ. ಸಿಟಿಜನ್ ಆಪ್ ಮೂಲಕವೂ ಸಾರ್ವಜನಿಕರು ಬಸ್ಗಳ ಮಾರ್ಗ ಮತ್ತು ಸಮಯದ ವಿವರವನ್ನು ತಿಳಿದುಕೊಳ್ಳಬಹುದಾಗಿದೆ. ಸಾರ್ವಜನಿಕ ಮಾಹಿತಿ ವ್ಯವಸ್ಥೆ (ಪಿಐಎಸ್) ಬಸ್ನಲ್ಲಿ ಅಳವಡಿಸಿದ್ದರಿಂದ ಪ್ರಯಾಣಿಕರು ನಿಲ್ದಾಣಗಳ ಮಾಹಿತಿ ತಿಳಿಯಬಹುದಾಗಿದೆ.
ಸ್ಮಾರ್ಟ್ ವಾಟರ್:
- ನಗರದಾದ್ಯಂತ ಸಾರ್ವಜನಿಕರಿಗೆ ಕುಡಿಯುವ ನೀರಿನ ಮೂಲ, ನೀರಿನ ಲಭ್ಯತೆ, ಸೌಲಭ್ಯ ಹಾಗೂ ನೀರಿನ ಗುಣಮಟ್ಟವನ್ನು ಕಂಡುಕೊಳ್ಳಲು ಈ ಮೂಲಕ ಸಾಧ್ಯವಾಗುತ್ತದೆ ಮತ್ತು ನೀರು ಪೋಲಾಗುತ್ತಿದ್ದಲ್ಲಿ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ.
ಇ-ಗವರ್ನನ್ಸ್ (ಇ-ಆಡಳಿತ):
- ಸಾರ್ವಜನಿಕರು ಸಲ್ಲಿಸಿದ ತಮ್ಮ ಕುಂದು ಕೊರತೆಗಳ ದೂರು / ಅಹವಾಲುಗಳನ್ನು ಶೀಘ್ರ ಪರಿಹರಿಸುವ ದೃಷ್ಟಿಯಿಂದ ಇ-ಗವರ್ನನ್ಸ್ ಅನುಕೂಲವಾಗಲಿದೆ.
ಅಂಬ್ಯುಲೆನ್ಸ್ & ಅಗ್ನಿ ಶಾಮಕ ವಾಹನಗಳಿಗಾಗಿ ತುರ್ತು ಸಾಧನ:
- ರಸ್ತೆ ಅವಘಡ ಹಾಗೂ ಅಗ್ನಿ ಅವಘಡಗಳು ಅಥವಾ ಇತರೆ ತುರ್ತು ತೊಂದರೆಯಲ್ಲಿರುವ ಸಾರ್ವಜನಿಕರು ಸಿಟಿಜನ್ ಆಪ್ ಮೂಲಕ ಮಾಹಿತಿ ನೀಡಿದಲ್ಲಿ ಸಂಬಂಧಿತ ಸ್ಥಳಕ್ಕೆ ಶೀಘ್ರ ಅಂಬ್ಯುಲೆನ್ಸ್ / ಅಗ್ನಿ ಶಾಮಕ ವಾಹನಗಳನ್ನು ಕಳುಹಿಸುವವ ವ್ಯವಸ್ಥೆ ಮಾಡಲು ಈ ಸಾಧನ ಅವಶ್ಯಕವಾಗಿದೆ.
ಮಾಹಿತಿಯ ಕೇಂದ್ರ (ಪಾಯಿಂಟ್ ಆಫ್ ಇನ್ಫಾರ್ಮೆಶನ್) :
- ಸಾರ್ವಜನಿಕರಿಗೆ ಅಗತ್ಯ ಶಾಲೆ/ಕಾಲೇಜು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಔಷಧ ಅಂಗಡಿಗಳು ಹಾಗೂ ಪ್ರಮುಖ ಕೆರೆಗಳು, ಉದ್ಯಾನಗಳು ಹಾಗೂ ಇತರೆ ಮಾಹಿತಿಗಳನ್ನು ಸ್ಥಳ ಸಮೇತ ತಿಳಿದುಕೊಳ್ಳಲು ಈ ಆಪ್ ಅನುಕೂಲವಾಗಲಿದೆ.
ವಿಡಿಯೋ ವಿಶ್ಲೇಷಣೆ (ವಿಡಿಯೋ ಅನಾಲಿಸ್ಟಿಕ್):
- ನಗರದ ಪ್ರಮುಖ ಸ್ಥಳಗಳಲ್ಲಿ ಸಂಶಯಾಸ್ಪದವಾಗಿ ಓಡಾಡುವವರು, ಜನದಟ್ಟಣೆಯ ಚಿತ್ರಣ, ಕಸ ಬಿಸಾಡುವವರು ಹಾಗೂ ಸಂಚಾರ ಉಲ್ಲಂಘಣೆ ಮಾಡುವವರನ್ನು ಸುಲಭವಾಗಿ ಗುರುತಿಸಲು ಈ ಮೂಲಕ ಸಾಧ್ಯವಾಗಲಿದೆ.
ಬೆಳವಣಿಗೆಯ ನಾಗಾಲೋಟದಲ್ಲಿರುವ ಬೆಳಗಾವಿ ನಗರದಲ್ಲಿ ಅತ್ಯಾಧುನಿಕ ಹಾಗೂ ಸ್ಮಾರ್ಟ್ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್(ಸಮಗ್ರ ಆಜ್ಞಾ ಮತ್ತು ನಿರ್ವಹಣಾ ಕೇಂದ್ರ) ಮೂಲಕ ಇಡೀ ಬೆಳಗಾವಿ ನಗರದ ಸಂಚಾರ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ತುರ್ತು ವೈದ್ಯಕೀಯ ಸೌಲಭ್ಯ, ಜನದಟ್ಟಣೆ ನಿಯಂತ್ರಣ ಸಾಧ್ಯವಾಗಲಿದೆ.
ಶಶಿಧರ್ ಕುರೇರ್. ವ್ಯವಸ್ಥಾಪಕ ನಿರ್ದೇಶಕರು, ಬೆಳಗಾವಿ ಸ್ಮಾರ್ಟ್ ಸಿಟಿ.
ಮಹಾನಗರ ಪಾಲಿಕೆ, ಸಾರಿಗೆ, ಪೊಲೀಸ್, ವೈದ್ಯಕೀಯ ಸೇರಿದಂತೆ ಪ್ರಮುಖ ಇಲಾಖೆಗಳ ಸಿಬ್ಬಂದಿ ಕಮಾಂಡ್ ಸೆಂಟರ್ ನಲ್ಲಿ ಕುಳಿತುಕೊಂಡು ಏಕಗವಾಕ್ಷಿ ವ್ಯವಸ್ಥೆಯಡಿ ಸಾರ್ವಜನಿಕರ ಸೇವೆಗೆ ಅಣಿಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಬೆಳಗಾವಿ ಸಿಟಿ ಇನ್ನಷ್ಟು ಸ್ಮಾರ್ಟ್ ಅಗುವುದು ಖಚಿತವಾದಂತಾಗಿದೆ.
ಗುರುನಾಥ ಕಡಬೂರ
ಉಪ ನಿರ್ದೇಶಕರು (ಪ್ರ)
ವಾರ್ತಾ ಇಲಾಖೆ, ಬೆಳಗಾವಿ.