ಕೂಗು ನಿಮ್ಮದು ಧ್ವನಿ ನಮ್ಮದು

ಆರು ತಿಂಗಳ ನಂತರ ದರುಶನ‌ ಕೊಡಲು ಸಜ್ಜಾಗಿದ್ದಾನೆ ಪೊಡವಿಗೊಡೆಯ ಉಡುಪಿಯ ಶ್ರೀಕೃಷ್ಣ: ಸಪ್ಟೆಂಬರ್ 28 ರಿಂದ ದೇವಸ್ಥಾನ ಓಪನ್

ಉಡುಪಿ: ಇದು ಉಡುಪಿ ಕೃಷ್ಣನ ಭಕ್ತರಿಗೆ ಸಂತಸದ ಸುದ್ದಿ. ಕಳೆದ ತಿಂಗಳ ಸುದೀರ್ಘ ಸಮಯದ ಬಳಿಕ ಕೃಷ್ಣ ಮಠ ಭಕ್ತರ ಪ್ರವೇಶಕ್ಕೆ ಸಿದ್ಧವಾಗಿದ್ದು, ಮಠಕ್ಕೆ ಪಾರಂಪರಿಕ ಬಣ್ಣ ಬಳಿದು ಹೊಸ ರೂಪ ನೀಡಲಾಗಿದೆ. ಗರ್ಭ ಗುಡಿ ಪ್ರವೇಶಕ್ಕೆ ಸಿದ್ದವಾದ ಹೊಸ ದಾರಿಯಲ್ಲಿ ಸಾಗುವಾಗ ಪ್ರಾಚೀನ ಪರಂಪರೆಗೆ ತೆರಳಿದ ಅನುಭವ ಸಿಗಲಿದೆ. ಈ ಕುರಿತ ಕಂಪ್ಲೀಟ್ ಡೆಟೇಲ್ಸ್ ಇಲ್ಲಿದೆ ನೋಡಿ.

ಕರಾವಳಿಯ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕಡಲತಡಿಗೆ ನಾಡಿನ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ. ಆದ್ರೆ ಉಡುಪಿ ಕೃಷ್ಣ ಭಕ್ತರಿಗೆ ಮಾತ್ರ ಮಠದ ಒಳಗೆ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಮಾಹಿತಿ ಇಲ್ಲದೇ ಆಗಮಿಸಿ ಭಕ್ತರು ಹೊರಗಿನಿಂದಲೇ ಪ್ರಾಥನೆ ಸಲ್ಲಿಸಿ ತೆರಳುತ್ತಿದ್ದರು. ಆದ್ರೆ ಈಗ ಆರು ತಿಂಗಳ ಬಳಿಕ ಕೃಷ್ಣಮಠದ ಆಡಳಿತ ಸಮಿತಿ ದೇವಾಲಯವನ್ನು ಭಕ್ತರಿಗೆ ತೆರೆಯುವ ನಿರ್ಧಾರ ಮಾಡಿದೆ. ಮಾರ್ಚ್ 22 ರಂದು ಸಾರ್ವಜನಿಕರಿಗೆ ದರ್ಶನ ನಿರ್ಬಂಧಿಸಿದ ಕೃಷ್ಣಮಠ ಇದೇ ತಿಂಗಳು ಅಂದರೆ ಸಪ್ಟೆಂಬರ್ 28 ನೇ ತಾರೀಖಿಗೆ ಮತ್ತೆ ದೇಗುಲ ತೆರೆಯಲಾಗುವುದು ಅಂತ ಹೇಳಿದ್ದಾರೆ. ಹೀಗಾಗಿ ಆರು ತಿಂಗಳ ಕಾಲ, ಪರ್ಯಾಯ ಈಶಪ್ರೀಯ ತೀರ್ಥರು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಕೃಷ್ಣ ಮಠದ ಭೋಜನ ಶಾಲೆ, ಬಡಗು ಮಳಿಗೆ ಪಾರಂಪರಿಕ ನೈಸರ್ಗಿಕ ಬಣ್ಣವನ್ನು ಬಳಿಯಲಾಗಿದೆ.

ಈ ಮಣ್ಣಿನ ಬಣ್ಣವನ್ನು ನೋಡುವಾಗ ವಾವ್ ಅನ್ನೋ ಉದ್ಧಾರ ಬಾರದೇ ಇರಲು ಅಸಾಧ್ಯ.‌ ಇನ್ನೂ ದರ್ಶನಕ್ಕೆ ತೆರಳುವ ಮಾರ್ಗವನ್ನು ಬದಲಾಯಿಸಲಾಗಿದ್ದು, ರಾಜಾಂಗಣ ಪ್ರಶೇಶ ಮಾಡಿ ಅಲ್ಲಿಂದ ಭೋಜನ ಶಾಲೆಯ ಮೇಲೆರಿ ಅಲ್ಲಿ ಕೃಷ್ಣ ಮಠದ ಒಳ ಪ್ರವೇಶ ಮಾಡುಲ ವ್ಯವಸ್ಥೆ ಮಾಡಿದ್ದಾರೆ. ಹೊಸ ಮಾರ್ಗದಲ್ಲಿ ಹೋಗ್ತಾ ಇದ್ರೆ ಪ್ರಾಚೀನ ಪರಂಪರೆಗೆ ಮರಳಿದ ಅನುಭವವಾಗುತ್ತೆ. ಗಾಳಿ ಬೆಳಕು ಇರುವ ಮಾರ್ಗವಾಗಿ ಸಾಗಿದ್ರೆ ಮೇಲ್ಭಾಗದಲ್ಲಿ ಕಳೆದ ವರ್ಷ ಹೊದಿಸಿದ ಸ್ವರ್ಣ ಗೋಪುರವನ್ನು ವೀಕ್ಷಿಸುವ ಅವಕಾಶ ಭಕ್ತರಿಗೆ ಸಿಗಲಿದೆ.

ಮಾಹಿತಿ: ಗೋವಿಂದ್ ರಾಜು.
ವ್ಯವಸ್ಥಾಪಕರು, ಅದಮಾರು ಆಡಳಿತ ಮಂಡಳಿ

ಇನ್ನೂ ಭಕ್ತರು ಸಾಮಾಜಿಕ ಅಂತರ ಪಾಲಿಸುವ ಜೊತೆಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಬಳಸಬೇಕಾಗಿದೆ. ಇದರ ಜೊತೆಗೆ ತಮ್ಮ ಗುರುತಿನ ಚೀಟಿಯ ಜೊತೆ ನೋಂದಣಿ ಮಾಡಿಸಿಕೊಳ್ಳಬೇಕು. ಮಠದಲ್ಲಿ ಜನಜಂಗುಳಿ ನಿಯಂತ್ರಿಸಲು ಕ್ಯೂ ವ್ಯವಸ್ಥೆ ಸಂಪೂರ್ಣ ಬದಲಾಯಿಸಲಾಗಿದ್ದು, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಪ್ರತ್ಯೇಕ ಪ್ರವೇಶದ್ವಾರದ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಭಕ್ತರು ಮಠದಿಂದ ಕಡ್ಡಾಯವಾಗಿ ಪ್ರವೇಶ ಪತ್ರ ಪಡೆದುಕೊಳ್ಳುವಂತೆ ಮಠದ ಆಡಳಿತ ಮಂಡಳಿ ತಿಳಿಸಿದೆ. ಇನ್ನು ಭೋಜನ ವ್ಯವಸ್ಥೆಯನ್ನು ಸದ್ಯ ಆರಂಭಿಸುವ ಯಾವುದೇ ಮುನ್ಸೂಚನೆಗಳಿಲ್ಲ. ಉಳಿದ ಎಲ್ಲಾ ಕಡೆಗಳಲ್ಲಿ ದೇವರ ದರ್ಶನವನ್ನು ಮಹಾದ್ವಾರದ ಮೂಲಕ ಭಕ್ತರು ಪಡೆದರೆ, ಉಡುಪಿಯಲ್ಲಿ ಮಾತ್ರ ಶ್ರೀಕೃಷ್ಣನನ್ನು ನವಗ್ರಹ ಕಿಂಡಿಯ ಮೂಲಕ ನೋಡಬೇಕಾಗುತ್ತದೆ.

ಹೀಗೆ ದರ್ಶನ ಮಾಡುವಾಗ ನವಗ್ರಹ ಕಿಂಡಿಗೆ ಸಾವಿರಾರು ಜನರ ಮುಖ ಉಸಿರು ತಾಗುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಅದಕ್ಕೆ ಮುಂಜಾಗೃತಾ ಕ್ರಮವಾಗಿ ಶ್ರೀಕೃಷ್ಣನನ್ನು ತೀರ್ಥ ಮಂಟಪದ ಸಮೀಪದಲ್ಲೇ ನೋಡುವಂತೆ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಕೃಷ್ಣಮಠ ತೆರೆದರೆ ಹೊರಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಪ್ರವಾಸಿಗರು ಬಹಳ ದೊಡ್ಡ ಸಂಖ್ಯೆಯಲ್ಲಿ ಜಿಲ್ಲೆಗೆ ಬರುವ ಸಾಧ್ಯತೆ ಇದ್ದು, ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಚೇತರಿಕೆ ಕಂಡು ಬರುವ ಸಾಧ್ಯತೆ ಇದೆ.

error: Content is protected !!