ಚಾಮರಾಜನಗರ: ಶನಿವಾರ ನಡುರಾತ್ರಿ ಮುಂಜಾನೆ 1.30 ರ ಸಮಯದಲ್ಲಿ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಶ್ರೀಗಂಧ ಕಳ್ಳರಿಬ್ಬರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಅರಣ್ಯ ಇಲಾಖೆಯ ಕಛೇರಿಯ ಸಮೀಪ ಇರುವ ಕಾವೇರಿ ನೀರಾವರಿ ನಿಗಮದ ವಸತಿ ಗೃಹದ ಆವರಣದಲ್ಲಿ ಮೂವರು ಶ್ರೀಗಂಧದ ಮರವನ್ನು ಕಳುವು ಮಾಡಲು ಕತ್ತರಿಸುತ್ತಿದ್ದಾರೆ ಎಂದು ವಲಯ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಬಂದ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಜಾನೆ ಬಂದ ದೂರವಾಣಿ ಕರೆಯಿಂದ ಎಚ್ಚೆತ್ತುಕೊಂಡ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್, ಉಪ ವಲಯರಣ್ಯಾಧಿಕಾರಿ ದೀಪಕ್ ಮಹಾಲಿಂಗಂ ಮತ್ತು ಪ್ರಮೋದ್, ಫಾರೆಸ್ಟ್ ಗಾರ್ಡ್ ನಿಂಗಮ್ಮ ಮತ್ತು ಈಶ್ವರಪ್ಪ, ಚಾಲಕರು ರಾಮು ಮತ್ತು ವೀಕ್ಷಕರು ದಾಳಿ ನಡೆಸಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ. ದೊಡ್ಡಿ ಗ್ರಾಮದ ಅರ್ಜುನ್ (23), ಶಿವು (23) ರನ್ನ ಬಂಧಿಸಲಾಯಿತು. ಬಂಧಿತರೊಂದಿಗೆ ಇದ್ದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕಾರ್ಲಹಳ್ಳಿ ಗ್ರಾಮದ ನವೀನ್ ಕುಮಾರ್ ಪರಾರಿಯಾಗಿದ್ದಾನೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಿಂದ ಒಂದು ಬೈಕು, ಒಂದು ಕೊಡಲಿ, ಒಂದು ಗರಗಸ ಮತ್ತು ಮೂರು ಮೊಬೈಲ್ ಫೋನ್ಗಳು ಜಪ್ತಿ ಮಾಡಿ ಪಡಿಸಿಕೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಶ್ರೀಗಂಧ ಕಳ್ಳಸಾಗಣೆ ವಿಪರೀತವಾಗಿದೆ ಎಂದು ಹೇಳಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಸಂಪತ್ತು ಲೂಟಿಯಾಗುವುದನ್ನು ತಡೆಗಟ್ಟಲು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಮತ್ತು ಯುವಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.