ಮೈಸೂರು: ನಂಜನಗೂಡಿನ ಕಪಿಲಾ ನದಿಗೆ ಹಾರಿದ ಯುವ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ತೆಪ್ಪ ನಡೆಸುವ ಅಂಬಿಗರು ಯುವ ಪ್ರೇಮಿಗಳನ್ನ ರಕ್ಷಿಸಿದ್ದಾರೆ. ಯುವತಿ ಅಪ್ರಾಪ್ತೆಯೆಂದು ಹೇಳಲಾಗಿದೆ. 17 ವರ್ಷದ ಅಪ್ರಾಪ್ತ ಯುವತಿ ಹಾಗೂ ಚಾಮರಾಜನಗರದ ಸೋಮವಾರಪೇಟೆಯ ಅಭಿ (19) ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ಅಪ್ರಾಪ್ತೆ ಯುವತಿ ಹಾಗೂ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿ ನಡುವೆ ಪ್ರೀತಿ ಹುಟ್ಟಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದ ವಿಚಾರ ಬಾಲಕಿಯ ಪೋಷಕರಿಗೆ ತಿಳಿದುಹೋಗಿದೆ. ಇಬ್ಬರ ನಡುವಿನ ಪ್ರೀತಿಯನ್ನ ವಿರೋಧಿಸಿದ ಬಾಲಕಿಯ ಪೋಷಕರು ಅಜ್ಜಿಯ ಮನೆಯಲ್ಲಿ ಇರಿಸಿದ್ದಾರೆ.
ಪ್ರಿಯಕರನಿಂದ ದೂರ ಮಾಡಿದ ಹಿನ್ನಲೆ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಭಿಗೆ ತಿಳಿಸಿದ್ದಾಳೆ. ಪ್ರಿಯತಮೆಯ ನಿರ್ಧಾರಕ್ಕೆ ಸಾಥ್ ನೀಡಿದ ಅಭಿ ಸಹ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಇಬ್ಬರೂ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ತೆಪ್ಪ ನಡೆಸುವ ಅಂಬಿಗರು ಹರಸಾಹಸ ನಡೆಸಿ ಇಬ್ಬರನ್ನೂ ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವ ಪ್ರೇಮಿಗಳೀಗ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.