ರಾಕಿಂಗ್ ಸ್ಟಾರ್ ಯಶ್ ಕುರಿತು ಕೇಳಿ ಬರುತ್ತಿರುವ ಸುದ್ದಿಗಳು ಒಂದೆರಡಲ್ಲ. ಅವರು ಈವರೆಗೆ ತಮ್ಮ 19ನೇ ಸಿನಿಮಾ ಘೋಷಣೆ ಮಾಡಿಲ್ಲ. ಈ ಕಾರಣಕ್ಕೆ ಗಾಸಿಪ್ ಮಂದಿ ಆ್ಯಕ್ಟೀವ್ ಆಗಿದ್ದಾರೆ. ಇವರ ಬಗ್ಗೆ ಒಂದಷ್ಟು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ಅವೆಲ್ಲವೂ ಸಂಪೂರ್ಣ ಸುಳ್ಳು ಎಂದು ಹೇಳೋಕೆ ಸಾಧ್ಯವಿಲ್ಲ. ನರ್ತನ್ ಜೊತೆ ಯಶ್ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಆ ಬಗ್ಗೆ ಅಪ್ಡೇಟ್ ಸಿಕ್ಕಿಲ್ಲ. ಈ ಸಿನಿಮಾ ಸೆಟ್ಟೇರುವುದರಲ್ಲಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಯಶ್ ಚಿತ್ರದಿಂದ ಹಿಂದೆ ಸರಿದರು ಎಂಬುದು ಬಳಿಕ ಗೊತ್ತಾಗಿತ್ತು. ಈಗ ಯಶ್ ಕುರಿತು ಮತ್ತೊಂದು ಸುದ್ದಿ ಹರಿದಾಡಿದೆ.
ಕೆಜಿಎಫ್ 2’ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶ್ ಖ್ಯಾತಿ ಹಬ್ಬಿದೆ. ಅವರಿಗೆ ಬಾಲಿವುಡ್ನಿಂದಲೂ ಆಫರ್ ಬರುತ್ತಿದೆ. ಆದರೆ, ಯಶ್ ಯಾಕೋ ಮನಸ್ಸು ಮಾಡುತ್ತಿಲ್ಲ. ಅವರು ತಾಳ್ಮೆಯಿಂದ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣ ಆಧರಿಸಿ ಸಿನಿಮಾ ಒಂದನ್ನು ಮಾಡುತ್ತಿದ್ದು ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಸಿನಿಮಾ ಡಿಸೆಂಬರ್ ವೇಳೆಗೆ ಸೆಟ್ಟೇರಲಿದೆ.
‘ಈಗಾಗಲೇ ರಾಮಾಯಣ ಚಿತ್ರಕ್ಕೆ ಸಿದ್ಧತೆ ನಡೆದಿದೆ. ರಣಬೀರ್ ಕಪೂರ್ ಅವರು ಅನಿಮೇಷನ್ ಸ್ಟುಡಿಯೋ ಡಿಎನ್ಇಜಿಗೆ ಭೇಟಿ ನೀಡಿದ್ದಾರೆ. ರಾಮಾಯಣ ಕೆಲಸದ ಪ್ರೊಗ್ರೆಸ್ ವೀಕ್ಷಿಸಲು ಅವರು ಅಲ್ಲಿಗೆ ಭೇಟಿ ನೀಡಿದ್ದರು. ರಣಬೀರ್ ಕಪೂರ್ ಅವರ ಲುಕ್ ಟೆಸ್ಟ್ ನಡೆಯಬೇಕಷ್ಟೆ. ಇದರ ಜೊತೆ ನಿತೇಶ್ ತಿವಾರಿ ಕಚೇರಿಗೂ ಅವರು ಭೇಟಿ ನೀಡಿದ್ದಾರೆ’ ಎಂದು ಮೂಲಗಳು ಹೇಳಿರುವುದಾಗಿ ಪಿಂಕ್ವಿಲ್ಲಾ ವರದಿ ಮಾಡಿದೆ.
ರಣಬೀರ್ ಕಪೂರ್ ರಾಮನ ಪಾತ್ರ ಮಾಡಿದರೆ ಆಲಿಯಾ ಸೀತೆಯ ಪಾತ್ರ ಮಾಡಲಿದ್ದಾರೆ. ಯಶ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಅವರದ್ದು ಯಾವ ಪಾತ್ರ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ಅವರು ಸಿನಿಮಾಗೆ ಅಧಿಕೃತವಾಗಿ ಸಹಿ ಹಾಕುವುದು ಅಷ್ಟೇ ಬಾಕಿ ಇದೆ ಎನ್ನಲಾಗುತ್ತಿದೆ. ಈ ಮೊದಲು ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಅಪ್ಡೇಟ್ ಸಿಕ್ಕಿಲ್ಲ.
ರಾಮಾಯಣ ಚಿತ್ರವನ್ನು ಅಲ್ಲು ಅರವಿಂದ್, ಮಧು ಮಂತೇನಾ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡಲಿದ್ದಾರೆ. ನಿತೇಶ್ ತಿವಾರಿ ಹಾಗೂ ರವಿ ಉದ್ಯಾವರ್ ನಿರ್ದೇಶನ ಮಾಡಲಿದ್ದಾರೆ. ಈ ಕುರಿತು ದೀಪಾವಳಿಯಲ್ಲಿ ಅಧಿಕೃತ ಘೋಷಣೆ ಆಗೋ ಸಾಧ್ಯತೆ ಇದೆ. ಈಗಾಗಲೇ ‘ಆದಿಪುರುಷ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಇದು ಕೂಡ ರಾಮಾಯಣ ಆಧರಿಸಿದೆ. ಹೀಗಿರುವಾಗಲೇ ಮತ್ತೊಂದು ಸಿನಿಮಾ ಸಿದ್ಧ ಆಗುತ್ತಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ