-ದೀಪಕ್ ಶಿಂಧೇ
ಬೆಂಕಿ ಬಿದ್ದ ಹೃದಯ ನನ್ನದು
ನಿನ್ನದೂ ಇರಬಹುದು ಇರಲಿಬಿಡು. ಶಾಶ್ವತ ಉರಿಯುವ ದೀಪಗಳಿಲ್ಲ ಈ ಲೋಕದಲ್ಲಿ
ಒಲವ ಹಣತೆಯೂ ಆರಿದೆಯಂತೆ ಇರಲಿಬಿಡು.
ಸೋತ ಮನಸುಗಳೆರಡು ಸಾಂತ್ವನವ ಬಯಸಿದರೆ ತಪ್ಪೇನೂ ಇಲ್ಲ ಇರಲಿ ಬಿಡು.
ಮಾತು ಮಗಿದಿವೆ ಅಷ್ಟೇ
ಸಮಯದ ಗೊಂಬೆಗಳು ನಾವು
ಮೊದಲ ಕಣ್ಣ ಹೊಳಪಿಲ್ಲ ಕನಸುಗಳೂ ಸಾಯುತ್ತಿವೆ ಇರಲಿ ಬಿಡು.
ಮೌನ ಆಪ್ತವಾಗುತ್ತಿದೆ ಈಗೀಗ ನೆನಪುಗಳೂ ಕಾಡುವದಿಲ್ಲ. ಮರೆತು ಬಿಟ್ಟೆವು ಏನೋ ಇರಲಿಬಿಡು.
ಚಿಂತೆ ಚಿತೆಗೆ ತಳ್ಳುತ್ತದೆ ಸಖಿ
ಪಾಪ ಪ್ರಜ್ಞೆ ಇಲ್ಲಿ ಯಾರನ್ನೂ ಬಿಟ್ಟಿಲ್ಲ. ಕರ್ಮದ ಋಣಗಳು ಭಾರವಾಗುವ ಮುನ್ನ. ಏನಾದಾರೂ ಆಗಲಿ ಇರಲಿಬಿಡು.
ಭಾರವಾಗುವ ಹೆಜ್ಜೆ
ನೀರಾಗುವ ಕಣ್ಣುಗಳು
ನಿಷ್ಠೆ ಇಲ್ಲದ ಒಲವು ಇದ್ದರೆಷ್ಟು
ಒಂಟಿತನ ಕಾಡುತಿದೆ.
ಸೋತು ಹೋಗಿದೆ ಜೀವ ಇದ್ದರೆಷ್ಟು-ಹೋದರೆಷ್ಟು ಇರಲಿ ಬಿಡು.
ಮುಗಿದು ಹೋಗಿದೆ ಬದುಕು
ಕಳೆದು ಹೋಗಿದೆ ಮನಸು
ಪರಸ್ಪರ ಎದುರಾದರು ಕಾಣಿಸದಿರಬಹುದು!!
ಈ ಜಗದ ಕನ್ನಡಿಯಲ್ಲಿ ನಿಜವಾದ ಬಿಂಬಗಳಿಲ್ಲ. ಬಹಳ ಬದಲಾವಣೆಯಾಗಿದೆಯಂತೆ ಇರಲಿಬಿಡು.