‘ಕಾಸಿನಸರʼ ಇದು ಸಿನಿಮಾ ಟೈಟಲ್. ಮಾರ್ಚ್ 3 ರಂದು ಈ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಹೆಬ್ಬೆಟ್ ರಾಮಕ್ಕ ಖ್ಯಾತಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಸಾರಥ್ಯದ ಕಾಸಿನಸರ ಚಿತ್ರ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಜಯ ರಾಘವೇಂದ್ರ ಅವರು ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ.
ಕಂಪ್ಲೀಟ್ ಆಗಿ ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಇರುವ ಈ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ. ಗ್ರಾಮೀಣ ಭಾಗದಿಂದಲೇ ಬಂದ ದೊಡ್ಡನಾಗಯ್ಯ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಹಲವಾರು ಅಂಶಗಳಿಂದ ಜನರಿಗೆ ಇಷ್ಟವಾಗುತ್ತದೆ. ಈ ಥರದ ಬದುಕೂ ಇದೆ, ಇದರ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ ಎಂದು ನಾಡಿನ ಜನರಿಗೆ ಹೇಳುವ ಚಿತ್ರ. ನಿರ್ದೇಶಕರು ಎಮೋಷನಲ್ ಆಗಿ ಈ ಕಥೆಯನ್ನ ಜನರ ಮುಂದೆ ಇಡಲು ಸಜ್ಜಾಗಿದ್ದಾರೆ.
ಕಾಸಿನಸರ ತುಂಬಾ ತೂಕವಾದ ಹೆಸರು, ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ ಅನ್ನೋದನ್ನ ನಟ ವಿಜಯ ರಾಘವೇಂದ್ರ ಎಳೆಎಳೆಯಾಗಿ ಬಿಚ್ಚಿಟ್ಟರು. ಹರ್ಷಿಕಾ ಪೂಣಚ್ಚ ಮೂರು ವರ್ಷದ ನಂತರ ನಟಿಸಿರೋ ಸಿನಿಮಾ ಕಾಸಿನಸರ. ಈ ಚಿತ್ರದಲ್ಲಿ ಹರ್ಷಿಕಾ ಕೃಷಿ ವಿದ್ಯಾರ್ಥಿನಿ ಸಂಪಿಗೆಯ ಪಾತ್ರ ಮಾಡಿದ್ದಾರೆ. ಗ್ರಾಜುಯೇಟ್ ಆದರೂ ಗಂಡನಿಗೆ ಸಪೋರ್ಟ್ ಆಗಿ ನಿಲ್ಲುವ ಪಾತ್ರ. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರೋ ಪಾತ್ರ ಅನ್ನೋದನ್ನ ನಟಿ ಹರ್ಷಿಕಾ ಹೇಳಿಕೊಂಡರು.
ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ‘ಇಲ್ಲಿ ಕಾಸಿನ ಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಇದೆ ಶುಕ್ರವಾರ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸಾಂಪ್ರದಾಯಿಕ, ಸಾವಯುವ ಕೃಷಿಯನ್ನು ಬಿಟ್ಟರೆ ಮುಂದೆ ನಮಗೆಲ್ಲ ಬಹುದೊಡ್ಡ ಅಪಾಯ ಕಾದಿದೆ ಎನ್ನುವುದು ಈಗಾಗಲೆ ಸಾಬೀತಾಗಿದೆ. ನಮ್ಮ ಮಣ್ಣನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.