ಧಾರವಾಡ: ವಿದ್ಯಾಕಾಶಿ, ಸಾಹಿತಿಗಳ ನಾಡು ಎಂಬ ಹೆಸರಿನಿಂದ ಕರೆಯುವ ಧಾರವಾಡಕ್ಕೆ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯವೊಂದು ಕಿರೀಟವಿದ್ದಂತೆ. ಇದರ ಅಧೀನದಲ್ಲಿದ್ದ ಪಿಯು ಕಾಲೇಜವೊಂದನ್ನ ಇದೀಗ ಬಂದ್ ಮಾಡಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಮಾತ್ರ ಬಲು ವಿಚಿತ್ರ. ಏನದು? ವರದಿ ಇಲ್ಲಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಯುನಿವರ್ಸಿಟಿ ಪಬ್ಲಿಕ್ ಪಿಯು ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಂದ್ ಆಗಲಿದೆ. ಗುಣಮಟ್ಟದ ಶಿಕ್ಷಣಕ್ಕೆ ದೇಶದಲ್ಲಿ ಹೆಸರುವಾಸಿ ಆಗಿರುವ ಕವಿವಿ ನಿರ್ಧಾರಕ್ಕೆ ಶಿಕ್ಷಣ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ. ಧಾರವಾಡ ಕವಿವಿ ಅಧೀನದಲ್ಲಿರುವ ಯುನಿವರ್ಸಿಟಿ ಪಬ್ಲಿಕ್ ಪಿಯು ಕಾಲೇಜು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದೆ.
ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕವಾಗಿ ಬಂದ್ ಮಾಡಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ವಾರ ನಡೆದ ಕರ್ನಾಟಕ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.
ಈ ಕಾಲೇಜ್ನಲ್ಲಿ ಪ್ರತಿ ವರ್ಷ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಿಂದ ಬಡತನದಲ್ಲಿರುವ ಸುಮಾರು 50 ರಿಂದ 60 ಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆಯುತ್ತಿದ್ದರು. ಅನುದಾನ ರಹಿತ ಕಾಲೇಜು ಆಗಿದ್ದರಿಂದ ಕರ್ನಾಟಕ ವಿಶ್ವವಿದ್ಯಾಲಯವೇ ತನ್ನ ಆಂತರಿಕ ಸಂಪನ್ಮೂಲದಿಂದ ಮುನ್ನಡೆಸುತ್ತ ಬರುತ್ತಿತ್ತು. ಸದ್ಯ ಕರ್ನಾಟಕ ವಿಶ್ವವಿದ್ಯಾಲಯ ಆರ್ಥಿಕವಾಗಿ ದಿವಾಳಿ ಆಗಿದ್ದು ಸದ್ಯ ವಿಶ್ವವಿದ್ಯಾಲಯವೇ ನಡೆಯುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ವಿವಿ ಅಧೀನದಲ್ಲಿರುವ ಯುನಿವರ್ಸಿಟಿ ಪಬ್ಲಿಕ್ ಪಿಯು ನಡೆಯುವುದೇ ಕಷ್ಟವಾಗಿದ್ದಕ್ಕೆ ಕಾಲೇಜ್ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ
ಒಂದು ವರ್ಷಕ್ಕೆ ಬೇಕು 93 ಲಕ್ಷ ರೂಪಾಯಿ ಅನುದಾನ
ಇನ್ನು ಈ ಕಾಲೇಜ್ ಬಂದ್ ಮಾಡಲು ಕವಿವಿ ಸಿಂಡಿಕೇಟ್ ಸಹ ಹಸಿರು ನಿಶಾನೆ ತೋರಿಸಿರುವುದು ಆಶ್ಚರ್ಯ ಮೂಡಿಸಿದೆ. ಈ ಕಾಲೇಜನ್ನು ವರ್ಷಕ್ಕೆ ಮುಂದುವರೆಸಿಕೊಂಡು ಹೋಗಲು ಕನಿಷ್ಠ 93 ಲಕ್ಷ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಆದರೆ, ಕಾಲೇಜಿನ ದಾಖಲಾತಿ ಹಾಗೂ ಪರೀಕ್ಷಾ ಶುಲ್ಕ ಸೇರಿದಂತೆ ಇತರ ಮೂಲಗಳಿಂದ ಪ್ರತಿ ವರ್ಷ 13 ಲಕ್ಷ ರೂಪಾಯಿ ಮಾತ್ರ ಸಂಗ್ರಹಣೆ ಆಗುತ್ತಿತ್ತು. ಬಾಕಿ ಉಳಿದ ಹಣವನ್ನು ಕವಿವಿ ಇಷ್ಟು ವರ್ಷಗಳವರೆಗೆ ತನ್ನ ಆಂತರಿಕ ಸಂಪನ್ಮೂಲದಿಂದಲೇ ಭರಿಸುತ್ತ ಬರುತ್ತಿತ್ತು. ಆದರೆ, ಸದ್ಯ ಕವಿವಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರಣ ಕಾಲೇಜು ಬಂದ್ ಮಾಡಲು ತೀರ್ಮಾನಿಸಿರುವುದು ನೋವಿನ ಸಂಗತಿ. ಸದ್ಯ ಇದಕ್ಕೆ ಶಿಕ್ಷಣ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದಿಂದ ಅನುದಾನ ತಂದು ಕಾಲೇಜು ಆರಂಭ ಮಾಡಲಿ ಎಂದಿದ್ದಾರೆ.
ಒಟ್ಟಿನಲ್ಲಿ ಧಾರವಾಡದಂತಹ ವಿದ್ಯಾಕಾಶಿಯಲ್ಲೇ ಕರ್ನಾಟಕ ವಿವಿ ತನ್ನ ಅಧೀನದಲ್ಲಿನ ಕಾಲೇಜು ಬಂದ್ ಮಾಡಲು ನಿರ್ಧಾರ ಮಾಡಿದ್ದು ಎಲ್ಲರಿಗೆ ಬೇಸರ ತಂದಿದೆ. ಆದಷ್ಟು ಬೇಗ ಹೊಸ ಸರ್ಕಾರದಿಂದ ಅನುದಾನ ತಂದು ಕಾಲೇಜು ಮರಳಿ ಪ್ರಾರಂಭ ಮಾಡಬೇಕು ಎಂಬುವುದು ಶಿಕ್ಷಣ ಪ್ರೇಮಿಗಳ ಒತ್ತಾಸೆ