ಬೆಂಗಳೂರು: ನಾನು ಎಲ್ಲರಿಗಿಂತ ಸೀನಿಯರ್, ಎಲ್ಲರಿಗಿಂತ ಜಾಸ್ತಿ ಅರ್ಹತೆ ಹೊಂದಿದ್ದೇನೆ. ಹೀಗಾಗಿ ನನ್ನನ್ನು ಬೆಂಗಳೂರು ಉಸ್ತುವಾರಿಯನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕೇಳಿದ್ದೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ರು. ಬೆಂಗಳೂರಿನ BJP ಕಚೇರಿಯಲ್ಲಿ ಮಾತನಾಡಿದ ವಿ.ಸೋಮಣ್ಣ, ಈ ಮುನ್ನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರು ನಗರದ ಉಸ್ತುವಾರಿಯನ್ನು ವಹಿಸಿಕೊಂಡಿದ್ರು.
ಹಾಗಾಗಿ ಈಗಲೂ ಅವರೇ ವಹಿಸಿಕೊಂಡರೂ ತೊಂದರೆ ಇಲ್ಲ. ಆದ್ರೆ ಇದು ಮುಖ್ಯಮಂತ್ರಿಗಳ ಪರಮಾಧಿಕಾರ ಯಾರಿಗೆ ಎಷ್ಟು ವರ್ಷ ಅನುಭವವಿದೆ, ಯಾರನ್ನು ಉಸ್ತುವಾರಿ ಮಾಡಬೇಕು ಎಂದು ಅವರಿಗೆ ತಿಳಿದಿದೆ. ನಾನು ಈ ವಿಚಾರಕ್ಕೆ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ. ಆದ್ರೆ ನಾನು ಜೆ.ಹೆಚ್ ಪಾಟೇಲರ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದವನು. ಜೊತೆಗೆ ಎಲ್ಲರಿಗಿಂತಲೂ ಜಾಸ್ತಿ ಅರ್ಹತೆ ಹೊಂದಿದ್ದೇನೆ. ಹೀಗಾಗಿ ನನ್ನನ್ನು ಬೆಂಗಳೂರು ಉಸ್ತುವಾರಿಯನ್ನಾಗಿ ಮಾಡಿ ಎಂದು ಕೇಳಿದ್ದೇನೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.
ನಾನು ೪೦ ವರ್ಷ ರಾಜಕಾರಣದಲ್ಲಿ ಅನುಭವ ಹೊಂದಿದ್ದೇನೆ. ನನ್ನ ಇಲಾಖೆಯಲ್ಲಿ ೧ ಲಕ್ಷ ಮನೆ ನೀಡುವ ಬಗ್ಗೆ ಯಾರದೋ ಸಲಹೆ ಪಡೆದು ಕೆಲಸ ಮಾಡುವ ಅವಶ್ಯಕತೆ ಇಲ್ಲ. ಬೆಂಗಳೂರು ಮಹಾನಗರದ ಬಡ ಜನರಿಗೆ ನಾವು ನೀಡುತ್ತಿರುವ ಹಲವು ಮನೆಗಳ ಕಾರ್ಯಕ್ರಮಕ್ಕೆ ನಾವು ಅಶೋಕ್ರನ್ನು ಕರೆದಿದ್ದೇವೆ. ಆದ್ರೆ ಅವರು ಚಿಕ್ಕಮಗಳೂರಿನಲ್ಲಿದ್ರು ಹಾಗಾಗಿ ಬರಲಿಲ್ಲ. ಅಶೋಕ್ MLA ಆಗಿದ್ದಾಗ ನಾನು ಮಂತ್ರಿಯಾಗಿದ್ದೆ. ಹಾಗಂತ ನನಗೆ ದುರಂಹಕಾರ ಇಲ್ಲ. ನನಗೆ ನನ್ನ ಪಕ್ಷ ಮುಖ್ಯ ಎಂದು ಸೋಮಣ್ಣ ಹೇಳಿದ್ದಾರೆ.
ನಮ್ಮ ಬೆಂಗಳೂರು ನಗರದಲ್ಲಿರುವವರು ಉಸ್ತುವಾರಿ ಸಚಿವರಾಗುವುದಕ್ಕೆ ಬಿ.ಎಸ್.ಯಡಿಯೂರಪ್ಪ ಈ ಹಿಂದೆಯೇ ಹೊಸ ಪೀಠಿಕೆ ಹಾಕಿ ಇಟ್ಟುಕೊಂಡಿದ್ರು. ಇವರಿಗೂ ನಾನು ಅದನ್ನೇ ಹೇಳಿದ್ದೇನೆ. ಇಲ್ಲ ಯಾರಿಗಾದ್ರು ಕೊಟ್ರು ಯಾವುದೇ ತೊಂದ್ರೆ ಇಲ್ಲ. ಆದ್ರೆ ನಾನು ಎಲ್ಲರಿಗಿಂತ ಬೆಂಗಳೂರು ನಗರಕ್ಕೆ ಸೀನಿಯರ್ ಆಗಿದ್ದೇನೆ. ಅಂಡರ್ ಪಾಸ್, ಫ್ಲೈ ಓವರ್, ಮೆಟ್ರೋ ಯೋಜನೆ ಎಲ್ಲವೂ ನನ್ನ ಕಾಲದಲ್ಲಿಯೇ ಆಗಿದೆ. ಈಗ ನನಗೆ ೭೦ ವರ್ಷ ಎಲ್ಲರಿಗಿಂತ ಸೀನಿಯರ್ ಆಗಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.
ಯಾವುದೇ ಮಿಂಟಿಂಗ್ಗೂ ಸೋಮಣ್ಣನವರು ಎಲ್ಲರನ್ನು ಕರೆಯುತ್ತಾರೆ ಆದ್ರೆ ಅಶೋಕ್ ಅವರನ್ನು ಮಾತ್ರ ಕರೆಯುವುದಿಲ್ಲ ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಣ್ಣ, ಅಶೋಕ್ ಎಂದು ಅವರ ತಂದೆ, ತಾಯಿ ಯಾಕೆ ಹೆಸರಿಟ್ಟರು ಗೊತ್ತಿಲ್ಲ. ಅಶೋಕ ಎಂದ್ರೆ ಸಾಮ್ರಾಟ ಚಕ್ರವರ್ತಿ ಎಂದರ್ಥ. ಸಾಮ್ರಾಟ ಚಕ್ರವರ್ತಿ ಕೆಲಸನೇ ಬೇರೆ, ನನ್ನ ಕೆಲಸನೇ ಬೇರೆ. ವಿಶ್ವನಾಥ್ ಅವರು ಯಾಕೆ ಈ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದು ಸೋಮಣ್ಣ ತಿಳಿಸಿದ್ರು.
ಬೆಂಗಳೂರು ನಗರಕ್ಕೆ ಯಾರನ್ನು ಉಸ್ತುವಾರಿಯನ್ನಾಗಿ ಮಾಡಿಲ್ಲ. ಅಶೋಕ್ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಸಮಯ ಮತ್ತು ಕೋರೋನಾ ನಿರ್ವಹಣೆಗಾಗಿ ಅಷ್ಟೇ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಸದ್ಯ ಇದೀಗ ಬೆಂಗಳೂರು ನಗರದ ಉಸ್ತುವಾರಿಯಾಗಿ ಅಶೋಕ್ ಅವರನ್ನು ಮಾಡುತ್ತಾರೋ ಅಥವಾ ಸೋಮಣ್ಣ ಅವರನ್ನು ಮಾಡುತ್ತಾರೋ, ಇಲ್ಲ ಬೇಕಿದ್ರೆ ಇಬ್ಬರಿಗೂ ಬೆಂಗಳೂರು ಉಸ್ತುವಾರಿಯನ್ನು ವಹಿಸುತ್ತಾರೋ ಅವರಿಗೆ ಬಿಟ್ಟಿದೆ ಎಂದು ಸೋಮಣ್ಣ ಹೇಳಿದ್ರು.